ಬೆಂಗಳೂರು: 2009-10ನೇ ಶೈಕ್ಷಣಿಕ ವರ್ಷದ ನಂತರ (ಜೂನ್ .12, 2010) ಕಾನೂನು ಪದವಿ ಪೂರ್ಣಗೊಳಿಸಿ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗದವರು ವಕೀಲ ವೃತ್ತಿಯನ್ನು ನಿಲ್ಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸುತ್ತೋಲೆ ಹೊರಡಿಸಿದೆ.
2009-10ನೇ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದಕ್ಕೂ ಮೊದಲು ಕಾನೂನು ಪದವಿ ಪೂರ್ಣಗೊಳಿಸಿದ ಮತ್ತು ವಕೀಲರಾಗಿ ದಾಖಲಾದ ಕಾನೂನು ಪದವೀಧರರು ಎಐಬಿಇ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಆ ನಂತರ ಕಾನೂನು ಪದವಿ ಪಡೆದಿರುವವರು ಪದವಿ ಪೂರ್ಣಗೊಳಿಸಿದ ಎರಡು ವರ್ಷದೊಳಗೆ ಎಐಬಿಇ ಉತ್ತಿರ್ಣರಾಗಿರಬೇಕು. ಇಲ್ಲವಾದಲ್ಲಿ, ಅರ್ಹತೆ ಪಡೆಯುವತನಕ ತಮ್ಮ ಕಾನೂನು ಅಭ್ಯಾಸ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ವಕೀಲರ ಪರಿಷತ್ತಿನ ಅಧ್ಯಕ್ಷ ರಾಜಣ್ಣ ಆರ್. ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅನರ್ಹ ವ್ಯಕ್ತಿಗಳು ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ಪ್ರಾಕ್ಟೀಸ್ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ವೇಳೆ ವಕೀಲರ ಪರಿಷತ್ತಿನ ಶಿಸ್ತುಕ್ರಮವನ್ನು ಲೆಕ್ಕಿಸದೆ ಯಾವುದೇ ವ್ಯಕ್ತಿ ವಕೀಲಿಕೆಯನ್ನು ಮುಂದುವರಿಸಿದ್ದಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 2023ರ ಸೆಕ್ಷನ್ 318, 319 ಮತ್ತು 61ರ ಅಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಬಾರ್ ಕೌನ್ಸಿಲ್ಗಳು ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಅಥವಾ ಅಸ್ತಿತ್ವದಲ್ಲಿರುವ ಸದಸ್ಯತ್ವಗಳನ್ನು ನವೀಕರಿಸುವ ಮೊದಲು ಎಐಬಿಇ ಕ್ಲಿಯರೆನ್ಸ್ ಮತ್ತು ಪ್ರಾಕ್ಟೀಸ್ ಪ್ರಮಾಣಪತ್ರವನ್ನು ಪರಿಶೀಲಿಸಬೇಕು. ಅನರ್ಹರ ಪಟ್ಟಿಯನ್ನು 30 ದಿನದೊಳಗೆ ವಕೀಲರ ಪರಿಷತ್ತಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಸಂಬಂಧ ನ.30ರಂದು ಹೈಕೋರ್ಟ್ಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.