ZP ready to quench thirst
ಗೌರಿಬಿದನೂರು: ಬೇಸಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಾರಂಭದಲ್ಲೇ ಸಂಬಂಧಿತ ಇಲಾಖೆಗಳು ಎಚ್ಚೆತ್ತುಕೊಂಡಿದ್ದು, ವಿವಿಧ ಮೂಲಗಳ ಮೂಲಕ ಜನರ ಜಲದಾಹ ನೀಗಿಸಲು ಸಜ್ಜಾಗಿವೆ.
ತಾಲೂಕಿನ ಒಟ್ಟು 315 ಹಳ್ಳಿಗಳಲ್ಲಿ 638 ಕೊಳವೆ ಬಾವಿಗಳ ಮೂಲಕ 175 ಓವರ್ ಹೆಡ್ ಟ್ಯಾಂಕರ್ಗಳಿಗೆ ನೀರು ಪೂರೈಸಿ ಬಳಿಕ ಸರಬರಾಜು ಮಾಡಲಾಗುತ್ತಿದೆ.ಈ ಮೊದಲು ಭೀಕರ ಬರಗಾಲದಲ್ಲಿ ಹಳ್ಳಿಗಳಲ್ಲಿ ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈಗ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಜೀವಜಲ ಮಿಷನ್ ಯೋಜನೆಡಿ 113 ಕೊಳವೆ ಬಾವಿಗಳನ್ನು ಕೋರಿಸಲಾಗಿದ್ದು, ಬೇಸಗೆಯಲ್ಲಿ ಸಂಭಾವ್ಯ ನೀರಿನ ಬವಣೆಯ ಆತಂಕವನ್ನು ಕಡಿಮೆಗೊಳಿಸಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ 2 ಇಂಚಿಗಿಂತ ಕಡಿಮೆ ನೀರಿನ ಲಭ್ಯತೆ ಕಡಿಮೆಯಿರುವ 22 ಜಾಗಗಳನ್ನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ಅನುದಾನದಲ್ಲಿ ಕೊಳವೆಬಾವಿ ಕೊರೆಸಲು ನಿರ್ಧರಿಸಲಾಗಿದೆ.
ತಾಲೂಕಿನಲ್ಲಿ ಜಿಪಂ ನೀರು ಸರಬರಾಜು ವ್ಯಾಪ್ತಿಯಲ್ಲಿ 45, ಗ್ರಾಮ ಪಂಚಾಯಿತಿಗಳ ಸುಪರ್ದಿಯಲ್ಲಿ 110 ಹಾಗೂ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಒಡೆತನದ ಸಂಸ್ಥೆ 70 ಶುದ್ಧ ಕುಡಿಯುವ ನೀರಿನ ಟಕಗಳಿವೆ. 8 ಟಕಗಳು ಕೆಟ್ಟಿವೆ, ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ತನ್ನ ವ್ಯಾಪ್ತಿಗೆ ಬರುವ ಟಕಗಳ ದುರಸ್ತಿ, ನಿರ್ವಹಣೆ ಜವಾಬ್ದಾರಿಯನ್ನು ಸಂಬಂಧಿತ ಗ್ರಾಪಂಗೆ ವಹಿಸಲಾಗಿದೆ. ದುರಸ್ತಿ ಮಾಡಲು ವಿಫಲವಾದಲ್ಲಿ ಜಿಪಂ ನೀರು ಸರಬರಾಜು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ.
ನೀರಿನ ಸಮಸ್ಯೆ ಎದುರಾಗದ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾಲ ಕಾಲಕ್ಕೆ ಜಿಲ್ಲಾಧಿಕಾರಿ, ಜಿಪಂಗೆ ವರದಿ ಸಲ್ಲಿಸಲಾಗುವುದು. ಈಗಾಗಲೆ 22 ಕೊಳವೆ ಬಾವಿಗಳನ್ನು ಕೊರೆಸಲು ನಿರ್ಧರಿಸಲಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ಅನುದಾನದ ಕೊರತೆಯಿಲ್ಲ.> ಎಂ.ವಿ.ಶ್ರೀನಿವಾಸ್, ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ತಾಲೂಕು ಸಹಾಯಕ ಅಭಿಯಂತರ
ಗ್ರಾಮೀಣ ಭಾಗದಲ್ಲಿ ಇಲಾಖೆಯಿಂದ ಪೂರೈಸಲಾಗುತ್ತಿರುವ ಕೊಳವೆ ಬಾವಿಗಳಲ್ಲಿ ನೀರಿನ ಸಾಮರ್ಥ್ಯ ಕಡಿಮೆ ಇದ್ದರೆ, ನೀರು ಬತ್ತಿ ಹೋಗಿದ್ದರೆ ಆ ಭಾಗದಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.ಈ ಬಗ್ಗೆ ರೈತರನ್ನು ಮನವೊಲಿಸಿ ಅನುಮತಿ ಪಡೆಯಲಾಗಿದೆ.ಇಲಾಖೆ ಗ್ರಾಮ ಪಂಚಾಯಿತಿವಾರು ಪಟ್ಟಿ ಸಿದ್ಧಪಡಿಸಲಾಗಿದ್ದು, ಒಟ್ಟಾರೆಯಾಗಿ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ನೀರು ವಿಭಾಗ ಸನ್ನದ್ಧವಾಗಿದೆ.ವಿಶೇಷವಾಗಿ ನೀರನ್ನು ಪೋಲು ಮಾಡದೆ ಮೀತವಾಗಿ ಬಳಕೆ ಮಾಡಲು ಗ್ರಾಪಂಗಳಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಗಳನ್ನು ಕರೆದು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ.ಯಾವುದೇ ಕಾರಣಕ್ಕೂ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಅನಿವಾರ್ಯವಾದ ಕಡೆ ಖಾಸಗಿ ಕೊಳವೆ ಬಾವಿ ಇಲ್ಲವೇ ಟ್ಯಾಂಕರ್ ಮೂಲಕ ಪೂರೈಸಲಾಗುವುದು.
ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಒಡೆತನದ ಸಂಸ್ಥೆ ಖಾಸಗಿ ಶುದ್ಧ ಕುಡಿಯುವ ನೀರಿನ ಟಕಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಅದೇ ರೀತಿ ಸರ್ಕಾರದ ಒಡೆತನದ ಟಕಗಳ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕು.ಕೆಟ್ಟಲ್ಲಿ ಶ್ರೀ ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ಜನ ಕಡುಬೇಸಗೆಯಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ.