ಗೋಕಾಕ ನಗರದ ಎನ್‌ಎಸ್‌ಎ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಎಸ್‌ಐಆರ್ ವಿಶೇಷ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ಗೋವಿಂದ ಕೊಪ್ಪದ, ಮಹಾದೇವ ಶೆಕ್ಕಿ, ಪರಸಪ್ಪ ಬಬಲಿ ಇತರರಿದ್ದರು.
ಮತದಾರರ ಪಟ್ಟಿಯಿಂದ ಮತಪಟ್ಟ, ನಕಲಿ ಮತ್ತು ತಪ್ಪಾಗಿ ನಮೂದಿಸಲಾದ ಹೆಸರುಗಳನ್ನು ತೆಗೆದುಹಾಕುವಲ್ಲಿ ಮತ್ತು ಅರ್ಹ ನಾಗರಿಕರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಲ್ಲಿ ಬಿಎಲ್‌ಎ-2 ಪಾತ್ರ ಮಹತ್ವದ್ದಾಗಿದೆ. ಮತದಾರರ ಪಟ್ಟಿ ಪರಿಶೀಲನೆ ಹಾಗೂ ನವೀಕರಿಸುವ ಅಭಿಯಾನ ಯಶಸ್ವಿಯಾಗಿ ನಡೆಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಎನ್‌ಎಸ್‌ಎ ಕಚೇರಿಯಲ್ಲಿ ಅರಬಾವಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಎಸ್‌ಐಆರ್ ವಿಶೇಷ ಸಭೆಯಲ್ಲಿ ಮಾತನಾಡಿದರು.
ಯಾವ ಮುಲಾಜಿಲ್ಲದೆ ನಕಲಿ ಮತದಾರರನ್ನು ಗುರುತಿಸಿ ಪಟ್ಟಿಯಿಂದ ಡಿಲೀಟ್ ಮಾಡಬೇಕು. ಎಸ್‌ಐಆರ್ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಬೇಕು. ಎಸ್‌ಐಆರ್‌ನ್ನು ಪಕ್ಷದ ವರಿಷ್ಟರು ಗಂಭೀರವಾಗಿ ತೆಗೆದುಕೊಂಡ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಅದೇ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದಲ್ಲಿ ಖಂಡಿತವಾಗಿಯೂ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಮಾಡುವವರ ಹೆಸರು ಕಂಡುಬಂದಲ್ಲಿ ಅಂತಹವರನ್ನು ನಕಲಿ ಮತದಾರರೆಂದು ಗುರುತಿಸಿ, ಕೇವಲ ಒಂದು ಮತಗಟ್ಟೆಗೆ ಅವರನ್ನು ಪರಿಗಣಿಸಬೇಕು. ಎಷ್ಟು ನಕಲಿ ಮತದಾರರ ಹೆಸರುಗಳನ್ನು ನಾವು ಡಿಲೀಟ್ ಮಾಡಿಸುತ್ತೇವೆಯೋ ಅಷ್ಟು ಪಕ್ಷಕ್ಕೆ ಅನುಕೂಲವಾಗಲಿದೆ. ನಕಲಿ ಮತದಾರರನ್ನು ಗುರುತಿಸುವಲ್ಲಿ ಬಿಎಲ್‌ಒ-2 ಕಾರ್ಯಕರ್ತರು ಹಿಂಜರಿಯಬಾರದು ಎಂದು ತಿಳಿಸಿದರು.
ಮಂಡಲದ ಬಿಎಲ್‌ಒ-1 ಗೋವಿಂದ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‌ಐಆರ್ ಮಹತ್ವ ವಿವರಿಸಿದರು.
ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಧಾನ ಕಾರ್ಯದರ್ಶಿಗಳಾದ ಪರಸಪ್ಪ ಬಬಲಿ, ಪ್ರಮೋದ ನುಗ್ಗಾನಟ್ಟಿ ಹಾಗೂ ಮಂಡಲದ 281 ಮತಗಟ್ಟೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.