Ambulance Blocked (ಚಿತ್ರ X) 
ರಾಜ್ಯ

ರೀಲ್ಸ್ ಹುಚ್ಚಿಗೆ ಮಾನವೀಯತೆಯೇ ಮರೆತ್ರಾ?; ಬೆಂಗಳೂರಲ್ಲಿ ಜೀವ ಉಳಿಸೋ ಆಂಬ್ಯುಲೆನ್ಸ್‌ಗೆ ಅಡ್ಡ ನಿಂತು ಯುವಕರ ವಿಕೃತ ಸ್ಟಂಟ್ಸ್! Ambulance Blocked

ಬೆಂಗಳೂರು: ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ (Ambulance Blocked) ಬಿಡದೆ, ಅದರ ಮುಂದೆಯೇ ಬೈಕ್ ಸವಾರರ ಗುಂಪೊಂದು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದಿದೆ. 

ಘಟನೆ ಏನು?

ಶನಿವಾರ (ಜು. 07) ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ನಗರದ ಗೋರಗುಂಟೆಪಾಳ್ಯದಿಂದ ಯಶವಂತಪುರ ಪ್ರದೇಶದವರೆಗೆ ಬೈಕ್ ಸವಾರರು ಆಂಬುಲೆನ್ಸ್​ಗೆ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. 

ವೈರಲ್​ ವಿಡಿಯೋದಲ್ಲೇನಿದೆ? 

ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್​ ತನ್ನ  ಸೈರನ್ ಅನ್ನು ಚಾಲನೆ ಮಾಡುತ್ತಾ ಚಲಿಸುತ್ತಿತ್ತು. ಈ ನಡುವೆ ಐದರಿಂದ ಆರು ಬೈಕ್​ ಸವಾರರು ರಸ್ತೆಯನ್ನು ಆಕ್ರಮಿಸಿಕೊಂಡಿದ್ದರು. ಇದರಿಂದಾಗಿ ಆಂಬುಲೆನ್ಸ್​ ಹೋಗುವ ದಾರಿಯನ್ನುತಡೆಯುತ್ತಾ, ತಮ್ಮ ಅಜಾಗರೂಕ ಸಾಹಸಗಳನ್ನು ಮುಂದುವರಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಇಂತಹ ಪುಂಡರಿಗೆ ಮಾನವೀಯತೆಯೇ ಇಲ್ಲವೇ? ಜೀವದ ಮೌಲ್ಯ ಗೊತ್ತಿಲ್ಲದ ಇವರ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ನಾಗರಿಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೊಬ್ಬ ಬಳಕೆದಾರ ಕೇವಲ ದಂಡ ವಿಧಿಸಿದರೆ ಸಾಲದು, ಇವರನ್ನು ಜೈಲಿಗಟ್ಟಬೇಕು. ಆಂಬ್ಯುಲೆನ್ಸ್ ತಡೆಯುವುದು ಅಪರಾಧ ಎಂದು ಕಮೆಂಟ್ ಮಾಡಿದ್ದಾರೆ.

ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಆದಾಗ್ಯೂ, ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ವೀಡಿಯೋ ರೀಲ್ಸ್ ಕ್ರೇಜ್‌ಗಾಗಿ ಮುಂಜಾನೆ ಮತ್ತು ತಡರಾತ್ರಿ ವೇಳೆ ಇಂತಹ ಅಪಾಯಕಾರಿ ಬೈಕ್ ಸ್ಟಂಟ್‌ಗಳು ಹೆಚ್ಚುತ್ತಿದ್ದು, ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ ಸಾರ್ವಜನಿಕರ ಜೀವಕ್ಕೆ ಕಂಟಕ ತಪ್ಪಿದ್ದಲ್ಲ ಎಂಬುದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ (ಏಜೆನ್ಸೀಸ್​).