ಯುವಕರೇ, ಕೃಷಿಯತ್ತ ಒಲವು ತೋರಿ 
ರಾಜ್ಯ

ಯುವಕರೇ, ಕೃಷಿಯತ್ತ ಒಲವು ತೋರಿ

ಕುದೂರು: ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ಕಂಡುಕೊಳ್ಳಬೇಕು. ಬಿತ್ತಿ-ಬೆಳೆಯುವ ಸಂಸ್ಕೃತಿ ಹೆಚ್ಚಾದಾಗ ಕೃಷಿ ಅವಲಂಬಿತ ಬದುಕು ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ಸಮಗ್ರ ಕೃಷಿ ಮಹಿಳೆ ಸೌಭಾಗ್ಯಾ ಮಲ್ಲಿಗುಂಟೆ ಕರೆ ನೀಡಿದರು.agriculture
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾಜ್ಯೋತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಜೀವನ ಶೈಲಿ ಹಾಗೂ ಪೂರ್ವಜರ ಜೀವನ ಶೈಲಿಗೂ ಇರುವ ಬದಲಾವಣೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಭಿವೃದ್ಧಿ ಮಂಡಳಿ ಸದಸ್ಯೆ ರೇಖಾ ಧನರಾಜ್ ಮಾತನಾಡಿ, ಮಕ್ಕಳು ಪಾಲಕರು ಹಾಗೂ ಗುರುಗಳಿಗೆ ಗೌರವ ನೀಡಬೇಕು. ನಡೆ-ನುಡಿ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಪ್ರಾಂಶುಪಾಲ ರಾಜಕುಮಾರ್ ಡಿ., ಮಾತನಾಡಿ, ಸಮಾನತೆ ಮತ್ತು ಆತ್ಮ ಗೌರವದೊಂದಿಗೆ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶ ನೀಡಿದಾಗ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದರು.
ಉಪನ್ಯಾಸಕರಾದ ಡಾ.ಕೃಷ್ಣ ಕಾಂಚಿತ್ ಆರ್., ಪುಟ್ಟಲಕ್ಷ್ಮಯ್ಯ ಸಿ.ಎಚ್., ಜಗದೀಶ್ ಜೆ., ವಿಜಯ್ ಕುಮಾರ್, ದಯಾನಂದ್, ಸಿದ್ದಪ್ಪ, ಡಾ.ಮುನಿರಾಜು, ಪುರುಷೋತ್ತಮ್ ಹಾಗೂ ವಿದ್ಯಾರ್ಥಿಗಳು ಇದ್ದರು.