ಹುಣಸೂರು ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್‌ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಯೋಧರನ್ನು ಗೌರವಿಸಲಾಯಿತು. ರೊ.ಶಾಮಣ್ಣ ಧರ್ಮಾಪುರ, ಲೂಯೀಸ್ ಪೆರೇರಾ, ಸ್ಮಿತಾ ದಯಾನಂದ್, ರಾಜಶೇಖರ್ ಇತರರಿದ್ದರು.
- ಅಸಿಸ್ಟೆಂಟ್ ಫೀಲ್ಡ್ ಆಫೀಸರ್ ತಾಶಿ ದೋನ್ದುಪ್
- ಕಾರ್ಗಿಲ್ ವಿಜಯ್ ದಿನಾಚರಣೆ
ಹುಣಸೂರು: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೈನಿಕನಾಗುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಅಸಿಸ್ಟೆಂಟ್ ಫೀಲ್ಡ್ ಆಫೀಸರ್ ತಾಶಿ ದೋನ್ದುಪ್ ಕೋರಿದರು.
ಕಾರ್ಗಿಲ್ ವಿಜಯ್ ದಿನಾಚರಣೆ ಅಂಗವಾಗಿ ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಸೋಮವಾರ ಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಲದಿಂದ 5700 ಮೀಟರ್ ಎತ್ತರ ಹಾಗೂ 76 ಕಿ.ಮೀ.ಉದ್ದದ ವಿಶ್ವದ ಎರಡನೇ ಅತಿದೊಡ್ಡ ಸಿಯಾಚಿನ್ ಗ್ರೇಸಿಯರ್ ಪರ್ವತಮಾಲೆಯನ್ನು ಉಳಿಸಿಕೊಳ್ಳಲು 27 ವರ್ಷಗಳ ಹಿಂದೆ ಭಾರತೀಯ ಸೇನೆ ತನ್ನ 574 ಅಮೂಲ್ಯ ಜೀವಗಳನ್ನು ಕಳೆದುಕೊಂಡಿತು. ಇದನ್ನು ನಮ್ಮ ಯುವಪೀಳಿಗೆ ಮರೆಯಬಾರದು. ದೇಶ ಸೇವೆ ಎನ್ನುವುದು ಕೇವಲ ಹೇಳಿಕೆಯಾಗಬಾರದು. ವಿದ್ಯಾರ್ಥಿಗಳು ಮತ್ತು ಯುವಸಮೂಹ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಹಿಂದೇಟು ಹಾಕಬಾರದು ಎಂದು ಕೋರಿದರು.
ಹವಾಲ್ದಾರ್ ಹರೀಶ್ ಉಯಿಗೌಡನಹಳ್ಳಿ ಮಾತನಾಡಿ, ಸೈನಿಕರಾಗಿ ದುಡಿಯುವವರಿಗಾಗಿಯೇ ಸರ್ಕಾರ ಅಗ್ನವೀರ್ ಯೋಜನೆ ಜಾರಿಗೊಳಿಸಿದೆ. ನಮ್ಮ ತಾಯಿನೆಲದ ಅಳಿಲು ಸೇವೆಯಾಗಿ 4 ವರ್ಷಗಳ ಕಾಲ ದೇಶದ ಗಡಿ ಕಾಯುವ ಪುಣ್ಯಕಾರ್ಯವನ್ನು ಪ್ರತಿಯೊಬ್ಬ ಯುವಕ ಮಾಡಬೇಕು ಎಂದರು.
ಲಾನ್ಸ್‌ನಾಯಕ್ ಗಿರೀಶ್ ರಾವ್ ಪವಾರ್ ಮಾತನಾಡಿ, ಸೈನಿಕನಾಗಿ ವೈಯಕ್ತಿಕ ಬದುಕನ್ನು ಮರೆತು ದೇಶಸೇವೆ ಮಾಡಿದೆನೆಂಬ ಹೆಮ್ಮೆ ನನ್ನದಾಗಿದೆ. ಇದೀಗ ಇಡೀ ಸಮಾಜ ಮತ್ತು ಪಾಲಕರು ನನ್ನನ್ನು ಗೌರವಿಸುತ್ತಾರೆ. ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕಿಲ್ಲ ಎಂದು ತಮ್ಮ ಸೇವಾ ಅವಧಿಯನ್ನು ನೆನಪಿಸಿಕೊಂಡರು.
ರೋಟರಿ ಅಧ್ಯಕ್ಷ ಶಾಮಣ್ಣ ಧರ್ಮಾಪುರ, ಕಾರ್ಯದರ್ಶಿ ಲೂಯಿಸ್ ಪೆರೇರಾ ಮಾತನಾಡಿದರು. ವಲಯ ಸೇನಾನಿ ಡಾ.ಕೆ.ಪಿ.ಪ್ರಸನ್ನ, ನಿವೃತ್ತ ಸೈನಿಕ ಮಂಜುನಾಥ್, ಸದಸ್ಯರಾದ ರೊ.ರಾಜಶೇಖರ್, ರೊ.ಲಕ್ಷ್ಮೀಕಾಂತ್, ರೊ.ಸ್ಮಿತಾ ದಯಾನಂದ್, ರೊ.ಸಿದ್ದೇಶ್, ರೊ.ಆನಂದ್, ಮುಖ್ಯಶಿಕ್ಷಕ ಹರೀಶ್ ಇತರರಿದ್ದರು. ಇದೇ ವೇಳೆ ರೋಟರಿ ವತಿಯಿಂದ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.