ಬಂಗಾರಪೇಟೆ Awareness ತಾಲೂಕಿನ ಎಸ್ಡಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಎಎಸ್ಐ ಶ್ರೀನಿವಾಸ್, ಸುಬ್ರಮಣಿ ಇದ್ದರು.
ಬಂಗಾರಪೇಟೆ: ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ Awareness ಹಾಗೂ ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು, ಪಾಲಕರು ಮತ್ತು ವಿಶೇಷವಾಗಿ ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳ ಸಹಕಾರ ಅತ್ಯವಶ್ಯಕವಾಗಿದೆ ಎಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.
ತಾಲೂಕಿನ ಎಸ್ಡಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ಬೆಳೆಯಲು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು. ಇದು ವ್ಯಕ್ತಿಯ ಬದುಕಿನಷ್ಟೇ ಅಲ್ಲ, ಕುಟುಂಬದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಆರೋಗ್ಯಕರ ಮತ್ತು ಸ್ವಸ್ಥ ಸಮಾಜ ನಿಮಾರ್ಣದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಮಾದಕ ವಸ್ತುಗಳ ಮಾರಾಟ ಅಥವಾ ಅಕ್ರಮ ಸಾಗಣೆಯಂಥ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ತುರ್ತು ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸುತ್ತಾರೆ ಎಂದರು.
ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಟ ಕಾನೂನುಬಾಹಿರ ಎಂಬುದು ಗೊತ್ತಿದ್ದರೂ ಡ್ರಗ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ನಿಮೂರ್ಲನೆಗೊಳಿಸಲು ಕಾನೂನು ಕ್ರಮಗಳ ಜತೆಗೆ ಯುವಜನರ ಜಾಗೃತಿ ಮತ್ತು ಸಹಕಾರವೂ ಅಷ್ಟೆ ಮುಖ್ಯ ಎಂದು ಹೇಳಿದರು.
ಎಸ್.ಬಿ.ಚಲಪತಿ, ಎಸ್ಡಿಸಿ ಕಾಲೇಜಿನ ಮುಖ್ಯಸ್ಥೆ ಉಷಾ ಗಂಗಾಧರ್, ಪ್ರಾಂಶುಪಾಲ ಜಗದೀಶ್ ಇದ್ದರು.