ಇಂಡಿ ನಗರದ ಪ್ರವಾಸಿ ಮಂದಿರದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಅಭಿಮಾನಿಗಳ ಸಭೆಯಲ್ಲಿ ಶಾಸಕರು ಮಾತನಾಡಿದರು. ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ಇಲಿಯಾಸ ಬೋರಾಮಣಿ, ಈರಣ್ಣ ವಾಲಿ, ರಾಹುಲ್ ಮಸಳಿ, ಅಜೀತ ಧನಶೆಟ್ಟಿ, ಶಿವಯೋಗಪ್ಪ ಚನಗೊಂಡ ಇತರರಿದ್ದರು.
- ಶಾಸಕ ಯಶವಂತರಾಯಗೌಡ ಪಾಟೀಲ ರಾಜೀನಾಮೆ ವಾಪಸ್ ಘೋಷಣೆ
- ಅಭಿಮಾನಿಗಳು, ಕಾರ್ಯಕರ್ತರಿಂದ ಒತ್ತಡ
ಅಧಿಕಾರಕ್ಕಿಂತ ನನ್ನ ಮತ ಕ್ಷೇತ್ರದ ಜನತೆಯ ವಿಶ್ವಾಸವೇ ಮುಖ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಾವಿರಾರು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ನನಗೆ ನನ್ನ ಪಕ್ಷದ ವರಿಷ್ಠರು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಅದಕ್ಕಾಗಿ ನನಗೆ ನೋವಾಗಿ ರಾಜೀನಾಮೆಯಂತಹ ದಿಟ್ಟ ನಿರ್ಧಾರ ಕೈಕೊಂಡಿದ್ದೆ. ಆದರೆ ನಿಮ್ಮ ಮನಸ್ಸಿಗೆ ನೋವಾಗುತ್ತದೆ ಎಂದರೆ ನಾನು ನನ್ನ ರಾಜೀನಾಮೆ ವಾಪಸ್ ಪಡೆಯತ್ತೇನೆ ಎಂದು ಘೋಷಣೆ ಮಾಡಿದರು.
ಮಂತ್ರಿ ಸ್ಥಾನಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ಮುಖ್ಯ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ. ಇನ್ನು ಮುಂದೆ ನಾನು ಎಂದೆಂದೂ ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನ್ನ ಮತ ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯವಾಗಿದ್ದು, ತಮ್ಮೆಲ್ಲರ ಮಧ್ಯದಲ್ಲಿದ್ದುಕೊಂಡು ನಾನು ಕೆಲಸ ಮಾಡುತ್ತೇನೆ ಎಂದರು.
ನಾನು 3 ಬಾರಿ ಶಾಸಕನಾಗಿ, 3 ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 40 ವರ್ಷಗಳಿಂದ ನನ್ನ ಮನೆತನ ಕಾಂಗ್ರೆಸ್ ಪಕ್ಷದ ಜೊತೆಗಿದೆ. ಕಾರಣ ನಾನು ಕಾಂಗ್ರೆಸ್ ವರಿಷ್ಠರಿಗೆ ವಿನಂತಿಸಿದ್ದೆ. ಆಗ ನನಗೆ ಅವರು ಮಾತು ಕೊಟ್ಟಿದ್ದರು. ಅದರಂತೆ ನಾನು ಒಬ್ಬ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಅದು ಸಿಗಲಿಲ್ಲ. ಮನಸ್ಸಿಗೆ ನೋವಾಗಿದೆ. ಇನ್ನು ಮುಂದೆ 2028ರಲ್ಲಿಯೂ ನಾನು ಸಚಿವ ಸ್ಥಾನ ನೀಡಿ ಎಂದು ಅವರ ಬಳಿ ಹೋಗುವುದಿಲ್ಲ ಎಂದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಜಾವೀದ ಮೋಮಿನ್, ಇಲಿಯಾಸ ಬೋರಾಮಣಿ, ಈರಣ್ಣ ವಾಲಿ, ರಾಹುಲ್ ಮಸಳಿ, ಅಜೀತ ಧನಶೆಟ್ಟಿ, ಶಿವಯೋಗಪ್ಪ ಚನಗೊಂಡ, ಬಿ.ಸಿ. ಸಾಹುಕಾರ, ರುಕ್ಮುದ್ದೀನ ತಳವಾರ, ಈರಣ್ಣ ವಾಲಿ, ಸಣ್ಣಪ್ಪ ತಳವಾರ, ಜೆಟ್ಟೆಪ್ಪ ರವಳಿ, ಸತೀಶ ಕುಂಬಾರ, ಗಡ್ಡೆಪ್ಪ ನಾವಿ, ಮೈಬೂಬ ಅರಬ, ಪ್ರಭುಗೌಡ ಪಾಟೀಲ, ಶ್ರೀಕಾಂತ ಕೂಡಿಗನೂರ, ಧನರಾಜ ಮುಜಗೊಂಡ, ಅಣ್ಣಪ್ಪ ಬಿದರಕೋಟಿ, ಜಟ್ಟೆಪ್ಪ ರವಳಿ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ರಾಜೀನಾಮೆಯನ್ನು ಕೂಡಲೇ ಹಿಂಪಡೆಯುವಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಯಶವಂತರಾಯ ಗೌಡರು ನಡೆಸಿದ ಆ ಸಭೆಯಲ್ಲಿ ಕಣ್ಣೀರಿಟ್ಟರು. ನಿಮಗೆ ನಾನು ದುಃಖ ನೀಡಲ್ಲ. ನಿಮ್ಮ ಒತ್ತಾಯದಂತೆ ನಾನು ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಶಾಸಕರು ರಾಜೀನಾಮೆ ಹಿಂಪಡೆಯುವ ಘೋಷಣೆ ಮಾಡಿದರು.