- ಸಹೋದರರಿಬ್ಬರ ಬಂಧನ, ವಿಚಾರಣೆ
ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ನಡುರಸ್ತೆಯಲ್ಲಿ ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ನಡೆದಿದೆ.
ಅಮೃತಾ (24) ಕೊಲೆಯಾದ ಯುವತಿ. ಅಮೃತಾ (24) ಕೊಲೆಯಾದ ಯುವತಿ. ಕೃತ್ಯ ಎಸಗಿದ್ದ ವಿಲ್ಸನ್‌ಗಾರ್ಡ್‌ನ ನಿವಾಸಿ ಧನುಷ್(24) ಹಾಗೂ ಆತನ ಸಹೋದರ ಸೂರ್ಯ (21) ಬಂಧಿತರು. ಜುಲೈ 13ರಂದು ಕೋಡಿಹಳ್ಳಿಯ ಎಚ್‌ಎಎಲ್ ರಸ್ತೆಯಲ್ಲಿ ಘಟನೆ ನಡೆದಿತ್ತು. ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜುಲೈ 15ರಂದು ಸಂಜೆ ಮೃತಪಟ್ಟಿದ್ದಾಳೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಧನುಷ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈತನಿಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಕೂಡ ಇದೆ. ಆದರೆ, ಕೌಟುಂಬಿಕ ಕಾರಣಕ್ಕೆ ಕೆಲ ವರ್ಷಗಳಿಂದ ದಂಪತಿ ವಿಚ್ಛೇಧನವಾಗಿತ್ತು. ಇನ್ನು ಸೂರ್ಯ ಫಾರ್ಮಸಿ ಕಂಪನಿಯಲ್ಲಿ ಸೆಲ್ಸ್‌ಮನ್ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಅಮೃತಾ, ನಾಲ್ಕನೇ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಮನೆ ಸಮೀಪದಲ್ಲಿ ಪಿಜ್ಜಾ ಶಾಪ್‌ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿಕೊಂಡಿದ್ದಳು.
ಎರಡು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಆರೋಪಿಗಳು ಹಾಗೂ ಯುವತಿ ಕುಟುಂಬ ಸದಸ್ಯರ ಪರಿಚಯವಾಗಿದೆ. ಇದೇ ವೇಳೆಯೇ ಧನುಷ್ ಮತ್ತು ಅಮೃತಾಳ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಐದು ತಿಂಗಳ ಹಿಂದೆ ಧನುಷ್‌ಗೆ ಮದುವೆಯಾಗಿ, ಮಗು ಇರುವುದು ಮತ್ತು ಬೇರೊಂದು ಯುವತಿ ಜತೆ ಸಂಬಂಧ ಹೊಂದಿದ್ದ ವಿಚಾರ ತಿಳಿದ ಅಮೃತಾ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಬಳಿಕ ಎರಡು ಕುಟುಂಬ ಸದಸ್ಯರು ಸಂಧಾನ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಅಮೃತಾ ಮನೆಯ ಸಮೀಪದಲ್ಲೇ ಇರುವ ಪಿಜ್ಜಾ ಶಾಪ್‌ನಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಜುಲೈ 13ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಕೋಡಿಹಳ್ಳಿಯ ಎಚ್‌ಎಎಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮಾರಕಾಸ್ತ್ರಗಳಿಂದ ಸಾರ್ವಜನಿಕವಾಗಿಯೇ ಸೂರ್ಯ ದಾಳಿ ನಡೆಸಿ, ಅಮೃತಾಳ ಎದೆ, ಬೆನ್ನಿಗೆ ಐದಾರು ಬಾರಿ ಚಾಕುವಿನಿಂದ ಭೀಕರವಾಗಿ ಇರಿದು ಪರಾರಿಯಾಗಿದ್ದ. ಈ ವೇಳೆ ಅಣ್ಣ ಧನುಷ್ ಕೂಡ ಸ್ಥಳದಲ್ಲೇ ಇದ್ದ. ಪ್ರಾಥಮಿಕ ವಿಚಾರಣೆಯಲ್ಲಿ ಧನುಷ್ ಸೂಚನೆ ಮೇರೆಗೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೃತ ಯುವತಿ ಅಮೃತಾಳ ಮಂಜುಳಾ ಚೀಟಿ ವ್ಯವಹಾರ ಮಾಡುತ್ತಿದ್ದರು. ಅವರ ಬಳಿ ಆರೋಪಿಗಳಿಬ್ಬರು ಮಾಸಿಕ ಚೀಟಿ ಕಟ್ಟುತ್ತಿದ್ದರು. ಮೂರುವರೆ ವರ್ಷಗಳಿಂದ ಹಣ ಕಟ್ಟಿದ್ದರು. ಆದರೆ, ಇದೀಗ ಮಂಜುಳಾ, ಆರ್ಥಿಕ ಸಮಸ್ಯೆ ಇರುವುದರಿಂದ ಸದ್ಯ ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಹೀಗಾಗಿ ಹಣಕಾಸು ವಿಚಾರಕ್ಕೆ ತಾಯಿ ಮಂಜುಳಾ ಹಾಗೂ ಪ್ರೀತಿ ನಿರಾಕರಿಸಿದ ಪುತ್ರಿ ಅಮೃತಾ ವಿರುದ್ಧ ಸಹದೋರರು ದ್ವೇಷ ಸಾಧಿಸುತ್ತಿದ್ದರು. ಇದರಿಂದ ತಾಯಿ, ಮಗಳನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.