- ವಾಲಿಬಾಲ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು
- 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತ ಅಥವಾ ಅಸ್ವಸ್ಥೆಯಿಂದ ಮೃತ ಎನ್ನಲಾಗಿದೆ
- ಬಾಲಕನ ಕೊನೇ ಕ್ಷಣಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದಕ್ಷಿಣ ಕನ್ನಡ: ಯಾರು, ಯಾವಾಗ ಸಾವಿಗೆ ಹತ್ತಿರವಾಗುತ್ತಾರೆ ಎಂಬುದು ಊಹಿಸಲಾರದ ಸಂಗತಿ. ಇವತ್ತು ಇದ್ದವರು ನಾಳೆ? ನಿಜಕ್ಕೂ ಗೊತ್ತಿಲ್ಲ ಎನ್ನುವಂತೆ ವಿದ್ಯಾರ್ಥಿ ಜೀವನವನ್ನು ಆನಂದಿಸಿ, ಹೆತ್ತವರ ಕನಸಿಗೆ ಅಣಿಯಾಗಬೇಕಿದ್ದ 10ನೇ ತರಗತಿ ವಿದ್ಯಾರ್ಥಿ ವಾಲಿಬಾಲ್ ಆಡುವಾಗಲೇ ದಾರುಣ ಅಂತ್ಯ ಕಂಡ ಘಟನೆ ಸುರತ್ಕಲ್ನ ಸೂರಿಂಜೆಯಲ್ಲಿ ವರದಿಯಾಗಿದೆ.
ಎಂದಿನಂತೆ ಸ್ನೇಹಿತರೊಡನೆ ವಾಲಿಬಾಲ್ ಆಡುತ್ತಿದ್ದಾಗ ಬಾಲಕ, ನೋಡ ನೋಡುತ್ತಲೇ ಕುಸಿದು ಬಿದ್ದು ಉಸಿರು ಚೆಲ್ಲಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಲಿಖಿತ್ ಅಮೀನ್ (15) ಎಂದು ಗುರುತಿಸಲಾಗಿದ್ದು, ಈತ ಸೂರಿಂಜೆ ಕೋಟೆ ಬೊಳ್ಳಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ (10ನೇ ತರಗತಿ) ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಸಿಸಿಟಿವಿ ದೃಶ್ಯದ ಪ್ರಕಾರ, ಎದುರಾಳಿ ತಂಡದ ಕೋರ್ಟ್ಗೆ ಬಾಲ್ ಅನ್ನು ಸರ್ವ್ ಮಾಡಿದ ಲಿಖಿತ್, ತಮ್ಮ ತಂಡದೊಂದಿಗೆ ಸೇರುತ್ತಾರೆ. ಆದ್ರೆ, ನೆಟ್ ಬಳಿ ಬರುತ್ತಿದ್ದಂತೆಯೇ ಸುಸ್ತಿನಿಂದ ಪಕ್ಕಕ್ಕೆ ಬರುವ ಅವರು, ಏಕಾಏಕಿ ಕುಸಿದು ಬೀಳುತ್ತಾರೆ. ಸಹ ವಿದ್ಯಾರ್ಥಿಗಳು ಮತ್ತು ಸ್ಥಳದಲ್ಲಿದ್ದವರು ತಕ್ಷಣವೇ ಅಮೀನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದೇ ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆತನನ್ನು ಪರೀಕ್ಷಿಸಿದ ವೈದ್ಯರು, ಲಿಖಿತ್ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ವಿದ್ಯಾರ್ಥಿ ಹೃದಯಾಘಾತ ಅಥವಾ ಅಸ್ವಸ್ಥತೆಯಿಂದ ಸಾವಿಗೀಡಾಗಿರಬಹುದು ಎಂದು ಹೇಳಲಾಗಿದೆಯೇ ವಿನಃ ಇನ್ನೂ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಅಸಲಿ ಕಾರಣ ಸ್ಪಷ್ಟವಾಗಲಿದೆ. ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಊರಿಗೆ ಊರೇ ಮೌನಕ್ಕೆ ಶರಣಾಗಿದೆ.