ಕೆಂಭಾವಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶುಕ್ರವಾರ ಮೊಹರಂ ನಿಮಿತ್ತ ನಡೆದ ಪೀರಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಹಿಂದೂ&ಮುಸ್ಲಿಂ ಬಾಂಧವರು. 
ರಾಜ್ಯ

ಹಲಿಗೆ ವಾದ್ಯಕ್ಕೆ ಹೆಜ್ಜೆ ಹಾಕಿದ ಯುವಕರು

ಕೆಂಭಾವಿ: ಪಟ್ಟಣ ಸೇರಿ ವಲಯದ ಹಲವೆಡೆ ಶುಕ್ರವಾರ ಮೊಹರಂ ಹಬ್ಬವನ್ನು ಜನತೆ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಈ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಿದೆ. ಕಳೆದ ಒಂದು ವಾರದಿಂದ ಪಟ್ಟಣದ ವಿವಿಧೆಡೆ ಸ್ಥಾಪಿಸಿದ್ದ ಪೀರಗಳ ದಫನ್​ ಕಾರ್ಯ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಝೇಂಡಾ ಕಟ್ಟಾ, ಖಾಜಿ ಮೊಹಲ್ಲಾ, ನಾಡಗೌಡ ಓಣಿ, ಲಾಲಬಂದಿ ಓಣಿ ಮತ್ತು ಅಗಸಿ ಮಸೀದಿಗಳಲ್ಲಿ ಸ್ಥಾಪಿಸಿದ್ದ ಪೀರಗಳ ಮುಂದೆ ಗುರುವಾರ ರಾತ್ರಿ ಹಲಿಗೆ ವಾದ್ಯಕ್ಕೆ ಹೆಜ್ಜೆ ಹಾಕಿದ ನೂರಾರು ಹಿಂದೂ-ಮುಸ್ಲಿಂ ಯುವಕರು ಭಕ್ತಿಯ ಪರಾಕಾಷ್ಠೆ ಮೆರೆದರು.
ಖಾಜಿ ಓಣಿಯಲ್ಲಿ ಮಧ್ಯರಾತ್ರಿ ಅಗ್ಗಿ ತುಳಿಯುವ ಮೂಲಕ ಮೊಹರಂ ಹಬ್ಬದ ಮೆರಗು ಮತ್ತಷ್ಟು ಹೆಚ್ಚಿಸಿದರು. ಶುಕ್ರವಾರ ಸಂಜೆ ವಿವಿಧೆಡೆಯಿಂದ ಆಗಮಿಸಿದ ಪೀರಗಳು ಅಗಸಿ ಮಸೀದಿಯ ಎದುರು ಜಮಾವಣೆಗೊಂಡು ಮುಖ್ಯ ಬಜಾರ ಮೂಲಕ ಮೆರವಣಿಗೆ ಮಾಡುತ್ತಾ ದಫನ್​ ಕಾರ್ಯಕ್ಕೆ ತೆರಳಿದರು. ನೂರಾರು ಹಿಂದೂ&ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.