Young people, think about the development of the country.
ಗುಬ್ಬಿ : ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ತುಮಕೂರು ನಗರ ಶಾಸಕ, ಸಿಐಟಿ ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಜ್ಯೋತಿ ಗಣೇಶ್ ಸಲಹೆ ನೀಡಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪದವಿ ಪಡೆಯುವಾಗ ಕನಸು ಹಾಗೂ ಗುರಿಯನ್ನು ಹೊಂದಿರುತ್ತೀರಿ. ಯಾವುದೇ ಕಾರಣಕ್ಕೂ ಒಂದೇ ಪ್ರಯತ್ನಕ್ಕೆ ಸುಮ್ಮನಾಗದೆ, ಹಲವು ರೀತಿಯ ಪ್ರಯತ್ನ, ಆಲೋಚನೆ, ಹೊಸತನ ಮಾಡಿದಾಗ ಖಂಡಿತ ಯಶಸ್ವಿಯಾಗುವಿರಿ ಎಂದರು.
ಬೆಂಗಳೂರಿನ ನೈಷಾ ಮೊಬಿಲಿಟಿ ಟೆಕ್ನ ಉಪಾಧ್ಯಕ್ಷ ಅತಿಶಯ್ ಜೈನ್ ಮಾತನಾಡಿ, ತಾಂತ್ರಿಕ ಜ್ಞಾನದ ಜತೆಗೆ ಮಾನವೀಯ ಮೌಲ್ಯ ಹಾಗೂ ನಿರಂತರ ಕಲಿಕೆಯ ಮನೋಭಾವ ಅಗತ್ಯವಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಇಂಜಿನಿಯರ್ಗಳಿಗೆ ಹೆಚ್ಚಿನ ಅವಕಾಶಗಳಿವೆ. ವಿದ್ಯಾರ್ಥಿಗಳು ಕೌಶಲ ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಲುಫ್ತಾನ್ಸಾ ಸಿಸ್ಟಮ್ಸ್ನ ಹೆಡ್ ಆಫ್ ಐಟಿ ಡೆಲಿವರಿ ಅಂಡ್ ಆಪರೇಷನ್ಸ್ನ ಕಿರಣ್ ಆಡಿ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿಗೆ ಕೃತಕ ಬುದ್ಧಿಮತ್ತೆ ಸಾಕಷ್ಟು ಪ್ರಗತಿಯತ್ತ ಸಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕಿದೆ ಎಂದರು.
ಸಿಐಟಿ ಸಂಸ್ಥೆಯ ನಿರ್ದೇಶಕ, ಪ್ರಾಂಶುಪಾಲ ಡಾ.ಡಿ.ಎಸ್. ಸುರೇಶ್ ಮಾತನಾಡಿ, ಪ್ರತಿ ವರ್ಷವೂ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಕಾಲೇಜಿನಿಂದ ಹೊರ ಹೋಗುತ್ತಿದ್ದಾರೆ ಎಂದರು.