ಮೃತ ನಾಗೇಂದ್ರ (30), ಸುಟ್ಟು ಕರಕಲಾದ ಕಾರು
- ಕಾರಿನೊಳಗೆ ಕುಳಿತು ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡ ನಾಗೇಂದ್ರ (30) ಸಾವು
- ಪ್ರೇಯಸಿ ಜೊತೆಗಿನ ಗಲಾಟೆ ಬೆನ್ನಲ್ಲೇ ಆತ್ಮಹತ್ಯೆ
- ಯುವತಿಗೆ ಚಾಕುವಿನಿಂದ ಇರಿದು ಒಟ್ಟಿಗೆ ಸಾಯಲು ಯತ್ನ
ತುಮಕೂರು: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅತ್ಯಂತ ಭೀಕರ ಘಟನೆಯೊಂದು ಸದ್ಯ ರಾಜ್ಯದ ಜನತೆಯನ್ನು ಅಕ್ಷರಶಃ ನಡುಗಿಸಿದೆ.
ಪ್ರೀತಿಸಿದ ಹುಡುಗಿ ಜೊತೆಗೆ ಕಾರಿನೊಳಗೆ ಗಲಾಟೆ ಮಾಡಿಕೊಂಡ ಪಾಗಲ್ ಪ್ರೇಮಿ, ತುಮಕೂರಿನ ಸಮೀಪ ಯುವತಿಗೆ ಚಾಕುವಿನಿಂದ ಇರಿದಿದ್ದಲ್ಲದೇ, ಆಕೆ ಕಾರಿನಿಂದ ಹೊರಗಿಳಿದ ಬೆನ್ನಲ್ಲೇ ತಾನು ಮೊದಲೇ ಪ್ಲ್ಯಾನ್ ಮಾಡಿಕೊಂಡು ತಂದಿದ್ದ ಪೆಟ್ರೋಲ್ ಬಾಂಬ್ ಸ್ಪೋಟಿಸಿಕೊಂಡು ಸಜೀವ ದಹನವಾದ ಘಟನೆ ತುಮಕೂರಿನ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ.
ವಿಷಯ ಗೊತ್ತಾದಾಗ...
ಬೆಳಗ್ಗೆ 11 ಗಂಟೆ ಸುಮಾರಿಗೆ ಜಯನಗರದಿಂದ ಪಿಕ್ಅಪ್ ಮಾಡಿದೆ. ಅದು ಅಂಕೋಲಾ ಕಡೆಗೆ ಹೋಗಬೇಕು ಎಂದು ಹೇಳಿದ್ರು. ಪೆಟ್ರೋಲ್ ಹಾಕಿಸುವಾಗ ಬಂಕ್ನಲ್ಲಿ ಇಳಿದು ಇಬ್ಬರೂ ವಾಶ್ರೂಂಗೆ ಹೋಗಿದ್ರು. ಆಮೇಲೆ ಅಂಕೋಲಾ ಪೊಲೀಸ್ ಠಾಣೆಯಿಂದ ನನಗೆ ಫೋನ್ ಬಂತು. ಇದೊಂದು ಕಿಡ್ನ್ಯಾಪ್ ಕೇಸ್ ಅಂತ ನಮ್ಮ ಸಹೋದರ ಹೇಳಿದರು. ಅದು ಅವನಿಗೆ ಗೊತ್ತಾಯ್ತು. ಆ ಕ್ಷಣದಿಂದಲೇ ಚಾಕುವಿನಿಂದ ಆ ಹುಡುಗಿಗೆ ಚುಚ್ಚುತ್ತಿದ್ದ ಎಂದರು.
ಚಾಲಕ ಅಳಲು
ಆಗ ನಾನೇ ಅವನಿಂದ ಚಾಕು ಕಿತ್ತು ಬಿಸಾಡಿದೆ. ಈ ವೇಳೆ ನನಗೂ ಆತನ ನಡುವೆ ಜಗಳ ನಡೆಯಿತು. ಇದೇ ಸಮಯದಲ್ಲಿ, ಹುಡುಗಿ ಡೋರ್ ತೆಗೆದು ಓಡಿ ಹೋದಳು. ಹೋಗುವಾಗ, ಅವನ ಬಳಿ ಬಾಂಬ್ ಇದೆ ಅಣ್ಣ, ನೀವು ತಪ್ಪಿಸಿಕೊಳ್ಳಿ ಎಂದಳು. ತಕ್ಷಣವೇ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ ಆತನಿಂದ ಪೆಟ್ರೋಲ್ ಬಾಂಬ್ ಕಿತ್ತೆಸೆದೆ. ಕಾರಿನ ಡಾಕ್ಯುಮೆಂಟ್ಸ್ ತೆಗೆದು ಹೊರಬಂದ ಕೂಡಲೇ ಸ್ಫೋಟಿಸಿಕೊಂಡ. ಹೆಂಡತಿಯ ಒಡವೆಯನ್ನು ಅಡವಿಟ್ಟು ಕಾರಿ ಖರೀದಿಸಿದ್ದೆ ಎಂದು ಡ್ರೈವರ್ ಅಳಲು ತೋಡಿಕೊಂಡಿದ್ದಾರೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದ್ದು, ಯುವತಿಯನ್ನು ರಮ್ಯಾ ಉಲ್ಲಾಸ್ (23) ಎಂದು ಹೇಳಲಾಗಿದೆ. ಘಟನೆಯಲ್ಲಿ ರಮ್ಯಾಳಿಗೆ ತೀವ್ರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾರಿನಲ್ಲಿ ನಾಗೇಂದ್ರ ಮತ್ತು ರಮ್ಯಾ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ, ಕ್ಯಾಬ್ ಚಾಲಕ ಕಾರನ್ನು ಚಲಾಯಿಸುತ್ತಿದ್ದರು ಎಂದು ವಿವರಿಸಲಾಗಿದೆ.
ಬೆಂಗಳೂರಿನಿಂದ ಅಂಕೋಲಾಕ್ಕೆ ಪ್ರಯಾಣ
ಮಾಹಿತಿಗಳ ಪ್ರಕಾರ, ಬೆಂಗಳೂರಿನ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಉಲ್ಲಾಸ್, ಪ್ರೇಮಿ ನಾಗೇಂದ್ರ ಜೊತೆಗೆ ಬೆಂಗಳೂರಿನಿಂದ ಅಂಕೋಲಾಕ್ಕೆ ಖಾಸಗಿ ಕಾರಿನಲ್ಲಿ ಹೊರಟ್ಟಿದ್ದರು. ಮಾರ್ಗ ಮಧ್ಯೆ, ತುಮಕೂರು ಸಮೀಪಿಸುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಯಾವುದೋ ವೈಯಕ್ತಿಕ ವಿಚಾರಕ್ಕೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.