ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಗೆ ಕುಷ್ಟಗಿ ತಾಲೂಕಿನ ಕುಂಬಳವತಿಯ ಕಳಿಕೇಶ 118 ಕೆಜಿ ತೂಕದ ಜೋಳದ ಮೂಟೆ ಹೊತ್ತು 1 ಕಿ.ಮೀ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ಸಲ್ಲಿಸಿದರು.
- ಜೋಳ ತುಂಬಿದ ಚೀಲದೊಂದಿಗೆ 1 ಕಿ.ಮೀ. ದೀರ್ಘದಂಡ ನಮಸ್ಕಾರ
ಮುನಿರಾಬಾದ್: ದೃಢಸಂಕಲ್ಪ ಮತ್ತು ಅಪಾರ ಭಕ್ತಿಯ ಮುಂದೆ ಯಾವುದೇ ಕಠಿಣ ಸವಾಲೂ ದೊಡ್ಡದಲ್ಲ ಎಂಬುದನ್ನು ಕೊಪ್ಪಳ ಜಿಲ್ಲೆಯ ಯುವಕನೊಬ್ಬ ಸಾಬೀತುಪಡಿಸಿದ್ದಾನೆ.
ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನ ಪಡೆದ ಯುವಕನೊಬ್ಬ ವಿಶಿಷ್ಟ ಹರಕೆ ತೀರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಕುಷ್ಟಗಿ ತಾಲೂಕಿನ ಕುಂಬಳವತಿ ಗ್ರಾಮದ ಕಳಿಕೇಶ (20) ಬೆನ್ನಿನ ಮೇಲೆ 118 ಕೆಜಿಯ ಜೋಳದ ಮೂಟೆ ಹೊತ್ತು 1 ಕಿ.ಮೀ. ದೂರದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಾ ಹುಲಿಗೆಮ್ಮ ದೇವಿಗೆ ಹರಕೆ ಒಪ್ಪಿಸಿದ್ದಾನೆ.
ಸಾಮಾನ್ಯವಾಗಿ ಭಕ್ತರು ದೇವಸ್ಥಾನಗಳಿಗೆ ನಡೆದುಕೊಂಡು ಹೋಗುವುದು ಅಥವಾ ದೀರ್ಘದಂಡ ನಮಸ್ಕಾರ ಹಾಕುವುದು ಸಾಮಾನ್ಯ. ಆದರೆ, ಕಳಿಕೇಶ ವಿಭಿನ್ನವಾಗಿ ಹರಕೆ ಸಮರ್ಪಣೆ ಮಾಡಿ ಗಮನ ಸೆಳೆದಿದ್ದಾರೆ.