ತೃತೀಯಲಿಂಗಿ ಪ್ರೇಮಿಯ ( Transgender Lover ) ಜತೆಗೆ ಸಾವಿಗೆ ಶರಣಾದ ಪ್ರಿಯಕರ 
ರಾಜ್ಯ

ಬಳ್ಳಾರಿಯಲ್ಲಿ ತೃತೀಯಲಿಂಗಿ ಪ್ರೇಮಿಯ ಜತೆಗೆ ಸಾವಿಗೆ ಶರಣಾದ ಪ್ರಿಯಕರ: ಇಬ್ಬರ ಜೀವ ತೆಗೆದ ಹಣ! Transgender Lover

ಪ್ರಮುಖ ಮುಖ್ಯಾಂಶಗಳು

  • ತೃತೀಯಲಿಂಗಿ ಪ್ರೇಮಿಯ ಜತೆಗೆ ಪ್ರಿಯಕರ ಸಾವಿಗೆ ಶರಣು
  • ಬಳ್ಳಾರಿಯ ಮೇದಾರ ಕೇತಯ್ಯ ನಗರದ ಬಾಡಿಗೆ ಮನೆಯಲ್ಲಿ ಘಟನೆ
  • ಕೆಲ ದಿನಗಳಿಂದ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳಗಳು ನಡೆಯುತ್ತಿತ್ತಂತೆ
ಬಳ್ಳಾರಿ: ಹಣಕಾಸಿನ ವಿಚಾರದಲ್ಲಿ ಮೂಡಿದ ಭಿನ್ನಾಭಿಪ್ರಾಯಗಳಿಂದಾಗಿ ತನ್ನ ತೃತೀಯಲಿಂಗಿ ಪ್ರೇಮಿಯ ( Transgender Lover ) ಜತೆಗೆ ಪ್ರಿಯಕರ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಮೃತರನ್ನು ತೃತೀಯಲಿಂಗಿ ಸುಹಾಸಿನಿ (29) ಮತ್ತು ಆಕೆಯ ಪ್ರಿಯತಮ ರಾಜಶೇಖರ ಎಂದು ಗುರುತಿಸಲಾಗಿದೆ. ಬಳ್ಳಾರಿಯ ಮೇದಾರ ಕೇತಯ್ಯ ನಗರದ ಬಾಡಿಗೆ ಮನೆಯೊಂದರಲ್ಲಿ ಇಬ್ಬರು ಸಾವಿಗೆ ಶರಣಾಗಿದ್ದಾರೆ.
ಮೂಲತಃ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮಕ್ಕೆ ಸೇರಿದ ಸುಹಾಸಿನಿ, ತೃತೀಯಲಿಂಗಿಯಾದ ಬಳಿಕ ಕಳೆದ 6 ವರ್ಷದಿಂದ ಮನೆ ತೊರೆದಿದ್ದಳು. ಇದರ ನಡುವೆ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ರಾಜಶೇಖರನ ಜತೆ ಸ್ನೇಹ ಬೆಳಸಿದ್ದಳು. ಇದೇ ಸ್ನೇಹ ಇಬ್ಬರ ನಡುವೆ ಪ್ರೀತಿ ಬೆಳೆಯುವಂತೆ ಮಾಡಿತು. ಇಬ್ಬರು ಹೊಸಪೇಟೆಯಲ್ಲಿ ಜೀವನ ನಡೆಸುತ್ತಿದ್ದರು.
ಸುಹಾಸಿನಿ ತನ್ನ ದುಡಿಮೆಯಲ್ಲಿ ರಾಜಶೇಖರನಿಗೆ ಆಟೋ ಕೊಡಿಸಿದ್ದಳು. ಇದರಿಂದ ಇಬ್ಬರು ಸುಖಿ ಜೀವನ ಸಾಗಿಸುತ್ತಿದ್ದರು. ಪ್ರತಿ‌ ಮಂಗಳವಾರ ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿ ಸೋಮವಾರ ಮಧ್ಯಾಹ್ನ ಬಳ್ಳಾರಿಗೆ ಬಂದಿದ್ದರು.
ಕೆಲ ದಿನಗಳಿಂದ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣ ಪುಣ್ಣ ಜಗಳಗಳು ನಡೆಯುತ್ತಿತ್ತಂತೆ. ಪ್ರತಿ ವಾರದಂತೆ ಮೊನ್ನೆ ಬಳ್ಳಾರಿಗೆ ಬಂದಿದ್ದ ಇವರು ಎಂ.ಕೆ.ನಗರದ ಮನೆಗೆ ತೆರಳಿದ್ದಾರೆ. ಅಲ್ಲಿಯೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬ್ರೂಸ್ ಪೇಟೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.