ಆನೇಕಲ್ ತಾಲೂಕಿನ ಅತ್ತಿಬೆಲೆಯ ಆಕ್ಸ್ಫರ್ಡ್ ವೈದ್ಯಕಿಯ ಕಾಲೇಜಿನಲ್ಲಿ ಆಯೋಜಿಸಿದ್ದ ಘಟಿಕೋತ್ಸವವನ್ನು ತಮಿಳುನಾಡು ಕೊಯಮ್ಮತ್ತೂರಿನ ಹೃದಯ ತಜ್ಞ ಡಾ.ಭುವನೇಶ್ವರನ್ ಉದ್ಘಾಟಿಸಿದರು. ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್, ಆಕ್ಸ್ರ್ಡ್ ವೈದ್ಯಕಿಯ ಕಾಲೇಜಿನ ಮುಖ್ಯಸ್ಥ ನರಸಿಂಹರಾಜು ಇದ್ದರು.
ಆನೇಕಲ್ : ಯುವ ವೈದ್ಯರು ಸಂವಹನಕ್ಕೆ ಆದ್ಯತೆ ನೀಡಬೇಕು. ಸಂವಹನದ ಮೂಲಕವೇ ಹಲವು ಕಾಯಿಲೆಗಳು ದೂರಾಗುತ್ತವೆ. ಹಣ ಗಳಿಸುವ ಅವಸರಕ್ಕೆ ಒಳಗಾಗದೆ ತಾಳ್ಮೆಯಿಂದಿದ್ದರೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ತಮಿಳುನಾಡು ಕೊಯಮ್ಮತ್ತೂರಿನ ಹೃದ್ರೋಗ ತಜ್ಞ ಡಾ.ಭುವನೇಶ್ವರನ್ ಹೇಳಿದರು.
ಅತ್ತಿಬೆಲೆಯ ಆಕ್ಸ್ಫರ್ಡ್ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ವೈದ್ಯಕಿಯ ಕ್ಷೇತ್ರದಲ್ಲಿ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳು ಹೆಚ್ಚಾಗುತ್ತಿದೆ. ವೈದ್ಯಕಿಯ ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವೈದ್ಯಕಿಯ ಸೇವೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಮಾತನಾಡಿ, ವೈದ್ಯಕಿಯ ವೃತ್ತಿ ಅತ್ಯಂತ ಶ್ರೇಷ್ಠ ಮತ್ತು ಸವಾಲಿನ ವೃತ್ತಿ. ಹಾಗಾಗಿ ಯುವ ವೈದ್ಯರು ವೃತ್ತಿ ಧರ್ಮ ಪಾಲನೆಗೆ ಆದ್ಯತೆ ನೀಡಬೇಕು. ಕೃತಕ ಬುದ್ಧಿಮತ್ತೆ ಸೇರಿ ತಂತ್ರಜ್ಞಾನದ ಬಗ್ಗೆ ತರಬೇತಿ ಮತ್ತು ತರಗತಿ ಆಯೋಜಿಸಬೇಕು ಎಂದು ಹೇಳಿದರು.
ಆಕ್ಸ್ರ್ಡ್ ವೈದ್ಯಕಿಯ ಕಾಲೇಜಿನ ಮುಖ್ಯಸ್ಥ ನರಸಿಂಹರಾಜು ಮಾತನಾಡಿ, ವೈದ್ಯಕಿಯ ಕಾಲೇಜಿನಲ್ಲಿ ಆಯುರ್ವೇದಕ್ಕೆ ಆದ್ಯತೆ ನೀಡಲು ಮುಂದಿನ ದಿನಗಳಲ್ಲಿ ಆಯುರ್ವೇದ ಕಾಲೇಜು ಪ್ರಾರಂಭಿಸಲಾಗುವುದು. ಆಗಸ್ಟ್ ಅಂತ್ಯದೊಳಗೆ ಡಯಾಬಿಟಿಸ್ ಕೇಂದ್ರ ಮತ್ತು ರೋಬೋಟ್ ಆಧಾರಿತ ಪ್ರಯೋಗಾಲಯ ಉದ್ಘಾಟಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೂಪಿಸಲಾಗಿದ್ದು, ಹೃದ್ರೋಗ, ನರರೋಗ, ಮೂತ್ರಪಿಂಡ ರೋಗ, ಯುರಾಲಜಿ, ನರಶಾಸ್ತ್ರ ಚಿಕಿತ್ಸೆ ವಿಭಾಗಗಳ ಸೇವೆ ಒದಗಿಸಲಾಗುವುದು ಎಂದರು. ವೈದ್ಯಕಿಯ ಕಾಲೇಜಿನ ವೈ.ಶ್ರೀನಿವಾಸುಲು, ಡಾ.ಸಿ.ಆರ್.ಜಯಂತಿ, ಡಾ.ರಜಿನಿ, ಡಾ.ವಿ.ಬಿ.ಗೌಡ, ಡಾ.ಅಭಿನೀತಾ ಇದ್ದರು.
ಪದವಿ ಪ್ರದಾನ : ಘಟಿಕೋತ್ಸವದಲ್ಲಿ 163 ವಿದ್ಯಾರ್ಥಿಗಳಿಗೆ ಪದವಿ, 40 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು 56 ವಿದ್ಯಾರ್ಥಿಗಳಿಗೆ ಅಲೈಡ್ ಹೆಲ್ತ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು. ಆಕ್ಸಿಜನ್ ಪುಸ್ತಕ ಬಿಡುಗಡೆ ಮಾಡಲಾಯಿತು.