ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೈಯಲ್ಲಿ ಪಾದರೆ ಹಿಡಿದು ಶಾಲೆಗೆ ಬರುತ್ತಿರುವುದು.
ಯಡ್ರಾಮಿ: ವಸ್ತಾರಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಸಮರ್ಪಕ ರಸ್ತೆ ನಿರ್ಮಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಗಮ ಸಂಚಾರಕ್ಕಾಗಿ ಪರದಾಡುವಂತಾಗಿದೆ. ನಿತ್ಯವೂ ಪಾದರೆಗಳನ್ನು ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ವಸ್ತಾರಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 225 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಳೇ ಕಟ್ಟಡ ಮಳೆಗಾಲದಲ್ಲಿ ಸೋರುವುದು ಹಾಗೂ ಶಿಥಿಲಾವಸ್ಥೆ ತಲುಪಿದ್ದರಿಂದ ಕಳೆದ ವರ್ಷ ಗ್ರಾಮದ ಹೊರ ವಲಯದ ಸರ್ವೇ ನಂ. 99ರ ನಾಲ್ಕು ಎಕರೆ ಜಮೀನಿನಲ್ಲಿ ಆರ್ಎಂಎಸ್ಎ ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ರಸ್ತೆ ಮಾಡದಿರುವುದರಿಂದ ಚಿಕ್ಕ ಮಕ್ಕಳಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ಪ್ರಾಥಮಿಕ ಶಾಲೆ ಸ್ಥಳಾಂತರ ಮಾಡದೆ, ಹಳೇ ಕಟ್ಟಡದಲ್ಲಿಯೇ ಮುಂದುವರಿಸಲಾಗುತ್ತಿದೆ.
ಹೊಸ ಕಟ್ಟಡದಲ್ಲಿ ಪ್ರೌಢಶಾಲೆ ಶುರುವಾದರೂ ರಸ್ತೆ ಇಲ್ಲದ್ದಕ್ಕೆ ನಿತ್ಯವೂ ಮಕ್ಕಳು ಗೈರಾಗುತ್ತಿದ್ದಾರೆ. ಶಾಲೆಗೆ ಹೋಗಲು ಸೂಕ್ತ ರಸ್ತೆಯಿಲ್ಲ. ಮಣ್ಣಿನ ಕಾಲು ದಾರಿಯಿದ್ದು, ಇದೀಗ ಮಳೆಗಾಲ ಆಗಿದ್ದರಿಂದ ಸಂಪೂರ್ಣ ರೋಡ್ ಕೆಸರು ಗದ್ದೆಯಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದು ಶಾಲೆಗೆ ಮತ್ತು ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಶಾಲೆ ಆವರಣದಲ್ಲಿ ವಿದ್ಯುತ್ ಮೇನ್ ಲೈನ್ ಕಂಬಗಳನ್ನು ಅಳವಡಿಸಿರುವುದು ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಶಾಲೆಗೆ ತೆರಳಲು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು. ಅಲ್ಲದೆ ಶಾಲೆ ಆವರಣದಲ್ಲಿ ಹಾದುಹೋಗಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕು ಎಂಬುದು ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕರ ಒತ್ತಾಯವಾಗಿದೆ.
"
ಶಾಲೆಗೆ ರಸ್ತೆ ಇಲ್ಲದಿರುವುದರಿಂದ ಮಳೆ ಬಂದಾಗ ಮಕ್ಕಳು ಪಾದರೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಕೆಸರಿನಲ್ಲಿ ಕಾಲು ಜರಿದು ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆ ಸಂಭವಿಸಿವೆ. ಈ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.
— > ರಾಜು ಬಡಿಗೇರ, ಸ್ಥಳಿಯ ನಿವಾಸಿ
"
ನೂತನ ಕಟ್ಟಡಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಸರ್ಕಾರದಿಂದ ಹಾಗೂ ದಾನಿಗಳ ಮೂಲಕ ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತಿದ್ದೇವೆ. ಆದರೆ ಶಾಲೆಗೆ ಬರಲು ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.
— > ಶಂಕರಗೌಡ ಬಿರಾದಾರ, ಪ್ರಭಾರ ಮುಖ್ಯ ಶಿಕ್ಷಕ