ಸಿಂದಗಿ ಪಟ್ಟಣದ ಭೀಮಾ ಯೂನಿವರ್ಸಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
- ಸುನೀಲ ನಾರಾಯಣಕರ ಅಭಿಮತ
- ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
ಸಿಂದಗಿ : ಯೋಗ ಎಂದರೆ ದೇಹ, ಮನಸ್ಸು ಮತ್ತು ಆತ್ಮಗಳನ್ನು ಸಮತೋಲನದಲ್ಲಿಡುವುದು ಎಂದು ಸಾವಯವ ಕೃಷಿ ಪಂಡಿತ, ಯೋಗ ಸಾಧಕ ಸುನೀಲ ನಾರಾಯಣಕರ ಹೇಳಿದರು.
ನಗರದಲ್ಲಿನ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಭೀಮಾ ಯೂನಿವರ್ಸಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಚೀನ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗವಾಗಿದೆ. ಯೋಗ ಎಂಬ ಪದವು ಸಂಸ್ಕೃತದ ಯುಜ್ ಎಂಬ ಧಾತುವಿನಿಂದ ಬಂದಿದ್ದು, ಯುಜ್ ಎಂದರೆ ಒಗ್ಗೂಡಿಸುವುದು ಎಂಬುದಾಗಿದೆ. ಭಾರತ ದೇಶ ತನ್ನದೆಯಾದ ಯೋಗ ಇತಿಹಾಸ ಹೊಂದಿದೆ. ನಮ್ಮ ಪೂರ್ವಜರು, ಋಷಿ ಮುನಿಗಳು, ದೇಹದ ಸಮತೋಲನಕ್ಕೆ, ಶಾಂತವಾದ ಮನಸ್ಸಿಗೆ, ಪರಿಶುದ್ಧ ಆತ್ಮಕ್ಕಾಗಿ ಯೋಗ ಒಂದು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ ಎಂದರು.
ದೈನಂದಿನ ಕಾರ್ಯಗಳು ಉತ್ಸಾಹ ಮತ್ತು ಭವಿಷ್ಯದ ಸ್ಪಷ್ಟ ಗುರಿ ಮತ್ತು ಧ್ಯೇಯಕ್ಕೆ ಯೋಗ ಪೂರಕವಾಗಿದೆ. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚುತ್ತದೆ ಎಂದು ತಿಳಿಸಿ ಯೋಗದ ವಿವಿಧ ಆಸನಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
ಸಂಸ್ಥೆ ನಿರ್ದೇಶಕ ಡಾ. ಎಂ.ಎಂ. ಪಡಶೆಟ್ಟಿ ಮಾತನಾಡಿ, ಯೋಗ ವ್ಯಾಯಾಮವಲ್ಲ. ಅದು ಒಂದು ಆರೋಗ್ಯಕರ ಶೈಲಿಯಾಗಿದೆ. ಆರೋಗ್ಯಯುತ ಬದುಕಿನ ಆತ್ಮವಿಶ್ವಾಸ ಹೆಚ್ಚಿಸುವ ಯೋಗವನ್ನು ದಿನಚರಿಯಾಗಿ ಅಳವಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಹೇಳಿದರು. ವಿದ್ಯಾರ್ಥಿ ಶ್ರಾವಣಿ, ಖುಷಿ, ಪೂಜಾ ಶಾಂಭವಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ಉಪ್ಪಾರ, ಸಂಸ್ಥೆ ಹಿರಿಯ ನಿರ್ದೇಶಕ ಜಿ.ಕೆ. ಪಡಾಗನೂರ, ಶರಣು ಮಾವೂರ, ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.