ಅರಸೀಕೆರೆ ನಗರದ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬ್ಬಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿರುವುದು. 
ರಾಜ್ಯ

ಒತ್ತಡ ಮುಕ್ತಿಗೆ ಯೋಗ ಸಹಕಾರಿ

ಅರಸೀಕೆರೆ: ಒತ್ತಡ ಮುಕ್ತ ಜೀವನ ನಡೆಸಲು ಯೋಗ ಅತ್ಯಂತ ಸಹಕಾರಿ ಎಂದು ನ್ಯಾಯಾಧೀಶ ಕಿರಣ್ ಕುಮಾರ್ ಡಿ.ವಡಿಗೇರಿ ಹೇಳಿದರು. ನಗರದ ನ್ಯಾಯಾಲಯ ನೂತನ ಸಂಕೀರ್ಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಯೋಗ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಾಂಗ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೂಲಕ ಕರ್ತವ್ಯ ನಿರ್ವಹಿಸುವ ನೌಕರರ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಣೆಗೆ ಯೋಗಭ್ಯಾಸ ವರದಾನವಾಗಿದೆ. ನಮಗೆ ದೊರೆಯುವ ಸಮಯದಲ್ಲಿ ಯೋಗಭ್ಯಾಸಕ್ಕೆ ಮೀಸಲಿಟ್ಟು ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು ಎಂದರು.
ಅಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ನೌಕರರಿಗೆ ದೈಹಿಕ ಮತ್ತು ಮಾನಸಿಕ ಒತ್ತಡಗಳು ಕಿಂಚಿತ್ತು ಕಡಿಮೆಯಾದ ಉದಾಹರಣೆಯಿಲ್ಲ. ದೈಹಿಕ ನ್ಯೂನತೆ ಮಾನಸಿಕ, ಖಿನ್ನತೆಗೆ ಯೋಗವು ದೀವ್ಯೌಷಧವಾಗಿದೆ. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ದೀರ್ಘ ಉಸಿರಾಟದ ಪ್ರಕ್ರಿಯೆಯೂ ಯೋಗದ ಒಂದು ಭಾಗವಾಗಿದ್ದು, ಸಮಯ ಸಂದರ್ಭದಲ್ಲಿ ಉಸಿರಾಟದ ಪ್ರಕ್ರಿಯೆಯನ್ನು ದಿನದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಯೋಗ ಗುರು ಹಾಗೂ ನಿವೃತ್ತ ಶಿರಸ್ತೇದಾರ್ ರುದ್ರೇಶ್ ಮಾತನಾಡಿ, ಜಂಜಾಟದಲ್ಲಿ ಮಾನಸಿಕ ದೃಢತೆಗೆ ಶಕ್ತಿ ಇಲ್ಲದಂತಾಗುವುದು ಸಹಜ. ಇದಕ್ಕೆಲ್ಲ ಪರಿಹಾರ ಸನಾತನ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಯೋಗದ ಅಭ್ಯಾಸ ಮತ್ತು ಅನುಷ್ಠಾನ ಪರಿಹಾರವಾಗಿದ್ದು, ಯೋಗದ ಬಗ್ಗೆ ನಿರಾಸಕ್ತಿ ತೋರದೇ ಹೆಜ್ಜೆ ಇಟ್ಟಾಗ ಮಾತ್ರ ಸುಖೀ ಜೀವನದೊಂದಿಗೆ ಒತ್ತಡ ರಹಿತ ಜೀವನ ನಮ್ಮದಾಗಿಸಿಕೊಳ್ಳಬಹುದು. ನಾವು ಕಲಿತಿರುವ ಯೋಗಗಳನ್ನು ಕಲಿಸಲು ಸಿದ್ಧವಿದ್ದು, ಸಿಬ್ಬಂದಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಚೇರಿ ಸಿಬ್ಬಂದಿಗೆ ಸಾಮೂಹಿಕವಾಗಿ ಯೋಗಾಸನಗಳ ಪರಿಚಯ,ತರಬೇತಿ ಮತ್ತು ಸದುಪಯೋಗ ಬಗ್ಗೆ ಮಾಹಿತಿ ನೀಡಲಾಯಿತು. ನ್ಯಾಯಾಧೀಶರಾದ ವೀಣಾ ಕೋಳೆಕಾರ, ದೀಪಿಕಾ ಹಾಗೂ ಕೋರ್ಟ್ ಸಿಬ್ಬಂದಿ ಹಾಜರಿದ್ದರು.