ಬದುಕಿನ ಪ್ರತಿ ಹಂತದಲ್ಲಿಯೂ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗದ ಮೊರೆಹೋಗುವುದು ಸೂಕ್ತ ಎನ್ನುವುದು ಸರ್ವವಿದಿತ. ಬಾಲ್ಯ, ಯೌವನದಲ್ಲಿ ಕಲ್ಲನ್ನೂ ಗುದ್ದಿ ಪುಡಿಮಾಡಬಲ್ಲ ಉತ್ಸಾಹ ತುಂಬಿ ತುಳುಕುತ್ತದೆ. ಆದರೆ ಕ್ರಮೇಣ ಆ ಮನೋಸ್ಥೈರ್ಯ ಕ್ಷೀಣಿಸುತ್ತದೆ. ವೃದ್ಧಾಪ್ಯದಲ್ಲಂತೂ ಪರಾವಲಂಬನೆಯ ಹಂತಕ್ಕೆ ದೇಹ ಸಾಗಿಬಿಡುತ್ತದೆ. ವಯಸ್ಸಾಗುವಿಕೆ ಎಂಬುದು ಹಂತ ಹಂತದ ಪ್ರಕ್ರಿಯೆ. ಹೀಗೆ ವಯಸ್ಸಾಗುತ್ತ ಹೋಗುವಾಗ, ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಯೋಗವು ಈ ನಿಟ್ಟಿನಲ್ಲಿ ಬಹುವಾಗಿ ನೆರವಾಗಬಲ್ಲದು. ಈ ಸಲದ ವಿಶ್ವ ಯೋಗ ದಿನದ ಘೋಷವಾಕ್ಯವೂ ಇದೇ ಆಗಿದೆ - ‘ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ’. ಈ ಬರಹವು ಯೋಗದ ಪ್ರಯೋಜನಗಳನ್ನು ಕಟ್ಟಿಕೊಟ್ಟಿದೆ.
ಮುಪ್ಪನ್ನು ನಿಧಾನಗೊಳಿಸುವ ಶಕ್ತಿ
ದೇಹದ ಜೀವಕೋಶಗಳು, ಅಂಗಾಂಗಗಳು ಹಾಗೂ ದೈಹಿಕ-ಮಾನಸಿಕ ಕಾರ್ಯಕ್ಷಮತೆ ಕ್ರಮೇಣ ಕುಗ್ಗುವ ಸಹಜ ಜೈವಿಕ ಪ್ರಕ್ರಿಯೆ ಮುಪು್ಪ. ಈ ಹಂತದಲ್ಲಿ ವೃದ್ಧಾಪ್ಯವನ್ನು ನಿಧಾನಗೊಳಿಸುವಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳು ಬಹುದೊಡ್ಡ ಪ್ರಭಾವವನ್ನು ಬೀರುತ್ತವೆ. ಹೇಗೆಂದರೆ....
*ಯೋಗವು ದೇಹದ ಲವಲವಿಕೆಯನ್ನು ಕಾಪಾಡುತ್ತದೆ ಮತ್ತು ಮಾಂಸಖಂಡಗಳನ್ನು ಸದೃಢ ಮಾಡುತ್ತದೆ. ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ, ವಯೋಸಹಜ ಸ್ನಾಯು ಕ್ಷಯವನ್ನು ತಡೆಯಲು ಸಹಾಯ ಮಾಡುತ್ತದೆ. ದೀರ್ಘವಾದ ಉಸಿರಾಟದ ಪ್ರಕ್ರಿಯೆ ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ದೇಹಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆಯಾಗುವಂತೆ ಮಾಡುತ್ತದೆ.
*ಪ್ರಾಣಾಯಾಮದ ಅಭ್ಯಾಸ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ರಕ್ತಸಂಚಾರವನ್ನು ಸುಧಾರಿಸುತ್ತದೆ. ಧ್ಯಾನದ ಅಭ್ಯಾಸವು ಒತ್ತಡ ಹಾರ್ವೇನ್ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದ ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಯೋಗಾಭ್ಯಾಸವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ, ಇದು ದೇಹದ ಪುನರುಜ್ಜೀವನಕ್ಕೆ ಅಗತ್ಯವಾಗಿದೆ.
*ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಮಿದುಳಿನ ಕಾರ್ಯಕ್ಷಮತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಜ್ಞಾನಾತ್ಮಕ ಕುಸಿತವನ್ನು ತಗ್ಗಿಸುತ್ತದೆ. ವೃದ್ಧಾಪ್ಯದಲ್ಲಿ ಕಾಣಬರುವ ಮರೆಗುಳಿತನದ ನಿರ್ವಹಣೆಗೆ ಯೋಗ ಸಹಕಾರಿಯಾಗಿದೆ.
*ಮಾನಸಿಕ ಶಾಂತಿ ಮತ್ತು ಭಾವನಾತ್ಮಕ ಸಮತೋಲನವನ್ನು ಬೆಳೆಸುತ್ತದೆ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಕೌಟುಂಬಿಕ ಹಾಗೂ ಸಾಮಾಜಿಕ ಜೀವನವನ್ನು ಸುಧಾರಿಸುತ್ತದೆ. ದೇಹದ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ವೃದ್ಧಾಪ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
*ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗಳು ಕ್ಷೀಣಗೊಳ್ಳುವ ಸಾಧ್ಯತೆ ವೃದ್ಧಾಪ್ಯದಲ್ಲಿ ಸರ್ವೆಸಾಮಾನ್ಯ. ಯೋಗವು ಇದನ್ನು ಸುಧಾರಿಸುತ್ತದೆ, ದೇಹದ ಆರೋಗ್ಯವನ್ನು ಕಾಪಾಡುತ್ತದೆ.
*ರಕ್ತದೊತ್ತಡ, ಮಧುಮೇಹ, ಹೃದಯರೋಗಗಳಂತಹ ವಯೋ ಸಹಜ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
*ಸ್ವಯಂ ಅರಿವು, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ವನ್ನು ಬೆಳೆಸುತ್ತದೆ, ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
*ದೇಹ, ಮನಸ್ಸು ಮತ್ತು ಆತ್ಮದ ಸಮನ್ವಯವನ್ನು ಸಾಧಿಸಿ, ದೀರ್ಘಾಯುಷ್ಯ, ಚೈತನ್ಯ ಮತ್ತು ಆರೋಗ್ಯಕರ ವೃದ್ಧಾಪ್ಯಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಾಣಾಯಾಮದಿಂದ ಉಸಿರಿನ ಮೇಲೆ ನಿಯಂತ್ರಣ ಸಾಧಿಸಬಹುದು.
*ಆಸನಗಳು ದೇಹವನ್ನು ಬಲಪಡಿಸುತ್ತವೆ, ಪ್ರಾಣಾಯಾಮವು ಜೀವಶಕ್ತಿಯನ್ನು ವೃದ್ಧಿಸುತ್ತದೆ, ಧ್ಯಾನವು ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಮೂರರ ಸಮನ್ವಯವೇ ಆರೋಗ್ಯಕರ, ಸಂತೋಷಕರ ಮತ್ತು ಗೌರವಯುತ ವೃದ್ಧಾಪ್ಯದ ಗುಟ್ಟು.
ಕಟಿ ಚಕ್ರಾಸನ
ವಿಧಾನ: ಕಾಲುಗಳನ್ನು ಭುಜಗಳ ಅಗಲದಲ್ಲಿ ಇರಿಸಿ ನಿಲ್ಲಿ. ಕೈಗಳನ್ನು ಮುಂದೆ ಚಾಚಿ. ಉಸಿರುಬಿಟ್ಟು ದೇಹವನ್ನು ಬಲಕ್ಕೆ ತಿರುಗಿಸಿ. ಎಡ ಕೈಯನ್ನು ಬಲ ಭುಜದ ಮೇಲೆ ಮತ್ತು ಬಲ ಕೈಯನ್ನು ಬೆನ್ನಿನ ಹಿಂದೆ ಇರಿಸಿ. ಮಧ್ಯಕ್ಕೆ ಬಂದು ಮತ್ತೊಂದು ಬದಿಗೆ ಪುನರಾವರ್ತಿಸಿ.
ಪ್ರಯೋಜನಗಳು: ಸೊಂಟ ಮತ್ತು ಬೆನ್ನಿನ ಕಾಠಿಣ್ಯವನ್ನು ಕಡಿಮೆ ಮಾಡುತ್ತದೆ. ಬೆನ್ನುಹುರಿಯ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.
ತಾಡಾಸನ
ವಿಧಾನ: ಕಾಲುಗಳನ್ನು ಸೇರಿಸಿ ನೇರವಾಗಿ ನಿಲ್ಲಿ. ಕೈಗಳನ್ನು ದೇಹದ ಪಕ್ಕದಲ್ಲಿ ಇರಿಸಿ.
ಉಸಿರೆಳೆದು ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ. ಪಾದದ ಬೆರಳುಗಳ ಮೇಲೆ ನಿಂತು ದೇಹವನ್ನು ಮೇಲಕ್ಕೆ ಚಾಚಿ. ಕೆಲವು ಕ್ಷಣ ಸಾಮಾನ್ಯ ಉಸಿರಾಟದೊಂದಿಗೆ ಇರಿಸಿ. ಉಸಿರು ಬಿಟ್ಟು ನಿಧಾನವಾಗಿ ಆರಂಭಿಕ ಸ್ಥಿತಿಗೆ ಬನ್ನಿ.
ಪ್ರಯೋಜನಗಳು: ದೇಹದ ಭಂಗಿಯನ್ನು ಸುಧಾರಿಸುತ್ತದೆ. ಬೆನ್ನು ಮತ್ತು ಕಾಲುಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ಎತ್ತರದ ಬೆಳವಣಿಗೆಗೆ ಸಹಕಾರಿ. ಸಮತೋಲನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ನಾಡೀಶೋಧನ ಪ್ರಾಣಾಯಾಮ
ವಿಧಾನ: ಸುಖಾಸನ ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಿ. ಬಲ ಹೆಬ್ಬೆರಳಿನಿಂದ ಬಲ ನಾಸಿಕವನ್ನು ಮುಚ್ಚಿ. ಎಡ ನಾಸಿಕದಿಂದ ಉಸಿರೆಳೆಯಿರಿ. ಎಡ ನಾಸಿಕವನ್ನು ಉಂಗುರ ಬೆರಳಿನಿಂದ ಮುಚ್ಚಿ ಬಲ ನಾಸಿಕದಿಂದ ಉಸಿರು ಬಿಡಿ. ಬಲ ನಾಸಿಕದಿಂದ ಉಸಿರೆಳೆದು ಎಡ ನಾಸಿಕದಿಂದ ಉಸಿರು ಬಿಡಿ. ಇದು ಒಂದು ಚಕ್ರ.
ಪ್ರಯೋಜನಗಳು: ನಾಡಿಗಳನ್ನು ಶುದ್ಧೀಕರಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ವಜ್ರಾಸನ
ವಿಧಾನ: ಮೊಣಕಾಲುಗಳನ್ನು ಮಡಚಿ ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ತೊಡೆಯ ಮೇಲೆ ಇರಿಸಿ. ಬೆನ್ನು ಮತ್ತು ಕುತ್ತಿಗೆಯನ್ನು ನೇರವಾಗಿರಿಸಿ. ಕಣ್ಣು ಮುಚ್ಚಿ ಸಾಮಾನ್ಯ ಉಸಿರಾಟ ಮಾಡಿ.
ಪ್ರಯೋಜನಗಳು: ಜೀರ್ಣಕ್ರಿಯೆ ಯನ್ನು ಉತ್ತಮಗೊಳಿಸುತ್ತದೆ. ಊಟದ ನಂತರ ಮಾಡುವ ಅತ್ಯುತ್ತಮ ಆಸನ. ಮನಸ್ಸನ್ನು ಶಾಂತ ಗೊಳಿಸುತ್ತದೆ. ಕಾಲು ಮತ್ತು ಬೆನ್ನಿನ ಭಂಗಿಯನ್ನು ಸುಧಾರಿಸುತ್ತದೆ.
ಪವನಮುಕ್ತಾಸನ
ವಿಧಾನ: ಬೆನ್ನಿನ ಮೇಲೆ ಮಲಗಿ. ಉಸಿರುಬಿಟ್ಟು ಮೊಣಕಾಲುಗಳನ್ನು ಎದೆಗೆ ತಾಗಿಸಿಕೊಳ್ಳಿ. ಕೈಗಳಿಂದ ಕಾಲುಗಳನ್ನು ಹಿಡಿದುಕೊಳ್ಳಿ. ತಲೆಯನ್ನು ಎತ್ತಿ ಮೊಣಕಾಲಿಗೆ ಮೂಗು ತಾಕಿಸಲು ಪ್ರಯತ್ನಿಸಿ. ಕೆಲವು ಉಸಿರಾಟಗಳವರೆಗೆ ಈ ಸ್ಥಿತಿಯಲ್ಲಿ ಇರಿ. ನಿಧಾನವಾಗಿ ವಿಶ್ರಾಂತಿ ಪಡೆಯಿರಿ.
ಪ್ರಯೋಜನಗಳು: ಹೊಟ್ಟೆಯ ಅನಿಲ ಸಮಸ್ಯೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕೆಳ ಬೆನ್ನಿನ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಅಂಗಗಳಿಗೆ ಮಸಾಜ್ ನೀಡುತ್ತದೆ.
ಭುಜಂಗಾಸನ
ವಿಧಾನ: ಹೊಟ್ಟೆಯ ಮೇಲೆ ಮಲಗಿ. ಅಂಗೈಗಳನ್ನು ಎದೆಯ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ಉಸಿರೆಳೆದು ತಲೆ ಮತ್ತು ಎದೆಯನ್ನು ಮೇಲಕ್ಕೆ ಎತ್ತಿ. ಮೊಣಕೈ ಗಳನ್ನು ಸ್ವಲ್ಪ ಬಾಗಿಸಿ. ಕೆಲವು ಕ್ಷಣ ಇದೇ ಸ್ಥಿತಿಯಲ್ಲಿ ಉಳಿದು ನಂತರ ನಿಧಾನವಾಗಿ ಕೆಳಗೆ ಬನ್ನಿ.
ಪ್ರಯೋಜನಗಳು: ಬೆನ್ನುಹುರಿಯನ್ನು ಬಲಪಡಿಸುತ್ತದೆ. ಎದೆಯನ್ನು ವಿಸ್ತರಿಸಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಬೆನ್ನಿನ ನೋವನ್ನು ಕಡಿಮೆ ಮಾಡಲು ಸಹಕಾರಿ. ಒತ್ತಡ ಮತ್ತು ಆಯಾಸ ವನ್ನು ಕಡಿಮೆ ಮಾಡು ತ್ತದೆ.
ಭ್ರಮರಿ ಪ್ರಾಣಾಯಾಮ
ವಿಧಾನ: ಆರಾಮವಾಗಿ ಕುಳಿತುಕೊಳ್ಳಿ. ಕಣ್ಣುಗಳನ್ನು ಮುಚ್ಚಿ. ಆಳವಾಗಿ ಉಸಿರೆಳೆಯಿರಿ. ಉಸಿರುಬಿಡುವಾಗ ಜೇನುನೊಣದ ಶಬ್ದದಂತೆ ಮ್.. ಎಂದು ಧ್ವನಿ ಮಾಡಿ. 5-10 ಬಾರಿ ಪುನರಾವರ್ತಿಸಿ.
ಪ್ರಯೋಜನಗಳು: ಮನಸ್ಸಿಗೆ ತಕ್ಷಣದ ಶಾಂತಿಯನ್ನು ನೀಡುತ್ತದೆ. ಒತ್ತಡ, ಕೋಪ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಏಕಾಗ್ರತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
ಕೋಲ್ಕತದಲ್ಲಿ ಪ್ರಧಾನಿ ಮೋದಿಯಿಂದ ಯೋಗ
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದಲ್ಲಿ ಇಂದು (ಭಾನುವಾರ) ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರೊಂದಿಗೆ ಯೋಗ ಮಾಡಲಿದ್ದಾರೆ. ಬೆಳಗ್ಗೆ 7ರಿಂದ 7.45ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ 35,000 ಜನರು ಪಾಲ್ಗೊಳ್ಳಲಿದ್ದಾರೆ. ಕೋಲ್ಕತದಾದ್ಯಂತ ವಿವಿಧ ಸ್ಥಳಗಳಲ್ಲಿ ಅಂದಾಜು 10 ಲಕ್ಷ ಜನರು ಯೋಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸುತ್ತಿರುವುದು ಇದೇ ಮೊದಲು. ಕೋಲ್ಕತದಲ್ಲಿ ಹೂಗ್ಲಿ ನದಿಯ ದಂಡೆಯಲ್ಲಿ ಹಾಗೂ 500 ದೋಣಿಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಈ ಬಾರಿ ವಿಶ್ವದಾದ್ಯಂತ 2500 ಸ್ಥಳಗಳಲ್ಲಿ ಯೋಗ ದಿನವನ್ನು ಆಯೋಜಿಸ ಲಾಗಿದ್ದು, ಇದರಲ್ಲಿ 210ಕ್ಕೂ ಹೆಚ್ಚು ಭಾರತೀಯ ರಾಯಭಾರ ಕಚೇರಿಗಳು ಭಾಗವಹಿಸುತ್ತಿವೆ.
ಸರ್ವರಿಗೂ ಅಗತ್ಯ
ಯೋಗವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಅಭ್ಯಾಸ ಮಾಡಬಹುದಾದ ಸಮಗ್ರ ಜೀವನಶೈಲಿಯಾಗಿದೆ. ಮಕ್ಕಳಲ್ಲಿ ಯೋಗವು ದೈಹಿಕ ಬೆಳವಣಿಗೆ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಯುವಕರಲ್ಲಿ ಒತ್ತಡ ನಿರ್ವಹಣೆ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಮತೋಲನವನ್ನು ಹೆಚ್ಚಿಸುತ್ತದೆ. ಮಹಿಳೆಯರು ಜೀವನದ ವಿವಿಧ ಹಂತಗಳಲ್ಲಿ (ಋತುಚಕ್ರ, ಗರ್ಭಧಾರಣೆ, ರಜೋನಿವೃತ್ತಿ) ಯೋಗದಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಹಾಗೆಯೇ ಪುರುಷರಲ್ಲಿ ಕಾರ್ಯಕ್ಷಮತೆ ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುತ್ತದೆ. ವಯೋವೃದ್ಧರಲ್ಲಿ ಸರಳ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಅಳವಡಿಸುವ ಮೂಲಕ ಚಲನಶೀಲತೆ, ಸಮತೋಲನ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
(ವಯಸ್ಸಾಗುವಿಕೆ ಹಂತದಲ್ಲಿ ಮತ್ತು ವೃದ್ಧಾಪ್ಯದಲ್ಲಿ ಈ ಆಸನಗಳು ಮತ್ತು ಪ್ರಾಣಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ದೈಹಿಕ ಸಾಮರ್ಥ್ಯ, ಸಮತೋಲನ, ಜೀರ್ಣಕ್ರಿಯೆ, ಉಸಿರಾಟದ ಕಾರ್ಯಕ್ಷಮತೆ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಯೋಗತಜ್ಞರ ಮಾರ್ಗದರ್ಶನದಲ್ಲಿಯೇ ಯೋಗಾಭ್ಯಾಸ ಮಾಡಬೇಕು.)
(ಲೇಖಕರು ಉಜಿರೆಯ ಎಸ್ಡಿಎಂ ನ್ಯಾಚುರೋಪಥಿ ಆಂಡ್ ಯೋಗಿಕ್ ಸೈನ್ಸಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು)