ಮಳಖೇಡ ಉತ್ತರಾದಿ ಮಠದ ಆವರಣದಲ್ಲಿ ಶ್ರೀ ಜಯತೀರ್ಥರ ಮಧ್ಯಾರಾಧನೆ ನಿಮಿತ್ತ ಅಪಾರ ಭಕ್ತರ ಜೈೂಷದ ಮಧ್ಯೆ ಸಂಭ್ರಮದಿಂದ ಜೋಡು ರಥೋತ್ಸವ ನೆರವೇರಿತು.
- ಮಳಖೇಡದಲ್ಲಿ ಶ್ರೀ ಟೀಕಾಚಾರ್ಯರ ಮಧ್ಯಾರಾಧನೆ ಸಂಭ್ರಮ
- ಗುರುಗಳ ದರ್ಶನ ಪಡೆದ ಭಕ್ತಜನ
ಕಲಬುರಗಿ: ಸೇಡಂ ತಾಲೂಕಿನ ಮಳಖೇಡದ ಕಾಗಿಣೆ ತೀರದಲ್ಲಿರುವ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಸೋಮವಾರ ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮದಿಂದ ಶ್ರೀ ಟೀಕಾಕೃತ್ಪಾದರ ಮಧ್ಯಾರಾಧನೆ ನಡೆಯಿತು.
ನಸುಕಿನ ಜಾವ ಶ್ರೀ ಸತ್ಯಾತ್ಮ ತೀರ್ಥರ ನೇತೃತ್ವದಲ್ಲಿ ಬ್ರಾಹ್ಮೀ ಉತ್ಥಾನ, ದಂಡೋದಕ ಸ್ನಾನ, ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ ನಡೆಯಿತು. ಬಳಿಕ ಶ್ರೀಗಳು ವಿದ್ಯಾರ್ಥಿಗಳಿಗೆ ಸುಧಾ ಪಾಠ, ಅಸಂಖ್ಯಾತ ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಪ್ರಾಂಗಣದಲ್ಲಿ ರಜತ ರಥೋತ್ಸವ ನೆರವೇರಿತು.
ರಥಾಂಗ ಹೋಮ ನೆರವೇರಿದ ಬಳಿಕ ವಿವಿಧ ಪುಷ್ಪಗಳಿಂದ ಅಲಂಕಾರಗೊಂಡ ಜೋಡು ರಥೋತ್ಸವಕ್ಕೆ ಶ್ರೀ ಸತ್ಯಾತ್ಮ ತೀರ್ಥರು ಚಾಲನೆ ನೀಡಿದರು. ಶ್ರೀಮಠದಿಂದ ಮುಖ್ಯ ರಸ್ತೆಯವರೆಗೆ ಅದ್ದೂರಿಯಗಾಗಿ ರಥೋತ್ಸವ ಜರುಗಿತು. ಜಯತೀರ್ಥರು ಇಂದ್ರಾಂಶ ಸಂಭೂತರೆಂದೆ ಖ್ಯಾತಿ ಪಡೆದಿದ್ದು, ರಥೋತ್ಸವ ಸಂದರ್ಭದಲ್ಲಿ ಇಂದ್ರ ದೇವನು ಮಳೆಯ ಸಿಂಚನ ಮಾಡಿದ. ದಾರಿಯುದ್ದಕ್ಕೂ ಭಕ್ತರ ಭಜನೆ, ನೃತ್ಯ ಗಮನಸೆಳೆಯಿತು. ಎದುರಾರೈ ಗುರುವೇ ನಿಮಗೆ ಸಮನಾರೈ.. ಯತಿಕುಲಮುಕುಟ ಶ್ರೀ ಜಯತೀರ್ಥ.. ಕಾಗಿಣೆ ತಟವಾಸ ಮಳಖೇಡ ನಿವಾಸ.. ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳಿ.. ಸಾರಿ ಭಜಿಸಿರೋ ಟೀಕಾರಾಯರ ಎಂಬುದು ಸೇರಿ ಹಲವು ದಾಸರ ಪದಗಳು ಮೊಳಗಿದವು. ಶ್ರೀ ಜಯತೀರ್ಥ ಮಹಾರಾಜ್ ಕಿ ಜೈ.. ಶ್ರೀ ಸತ್ಯಾತ್ಮ ತೀರ್ಥರಿಗೆ ಜಯವಾಗಲಿ.. ಹರಿ ಸವೋರ್ತ್ತಮ, ವಾಯು ಜೀವೋತ್ತಮ.. ಹರೇ ಶ್ರೀನಿವಾಸ.. ಶ್ರೀ ಗುರುಭ್ಯೋಂ ನಮಃ ಘೋಷಣೆಗಳು ಮೊಳಗಿದವು.
ಮುಂಬೈ ಸತ್ಯಧ್ಯಾನ ವಿದ್ಯಾಪಿಠದ ಕುಲಪತಿ ಪಂ.ವಿದ್ಯಾಸಿಂಹಾಚಾರ್ಯ ಮಾಹುಲಿ, ಪಂ.ಮಧ್ವಾಚಾರ್ಯ ಮೊಕಾಶಿ, ಪ್ರಧಾನ ಅಧಿಕಾರಿ ಪಂ. ವಿದ್ಯಾಧಿಶಚಾರ್ಯ ಗುತ್ತಲ, ಮಠದ ದಿವಾನ ಪಂ. ಶಶಿಧರ ಆಚಾರ್ಯ, ತಿರುಪತಿಯ ಪಂ.ಪಾಂಡುರಂಗಾಚಾರ್ಯ ರೊಟ್ಟಿ, ಪಂ.ಗುರುಮಧ್ವಾಚಾರ್ಯ ನವಲಿ, ಪಂ.ಘಂಟಿ ರಾಮಾಚಾರ್ಯ, ಮಳಖೇಡ ಉತ್ತರಾದಿಮಠದ ವ್ಯವಸ್ಥಾಪಕ ಪಂ.ವೆಂಕಣ್ಣಾಚಾರ್ಯ ಪೂಜಾರ್, ಪಂ.ಗೋಪಾಲಾಚಾರ್ಯ ಅಕಮಂಚಿ, ಸುಧೀಂಧ್ರಚಾರ್ಯ ಗದ್ದನಕೇರಿ, ಕೃಷ್ಣಾಚಾರ್ಯ ಉಪಾಧ್ಯಕ್ಷ, ಉತ್ತರಾದಿ ಮಠದ ಛಾಯಗ್ರಾಹಕ ವೆಂಕಟೇಶ ಆಚಾರ್ಯ ಚಿಂಚೋಳಿ ಸೇರಿ ಹಲವು ಪಂಡಿತರು ಪಾಲ್ಗೊಂಡಿದ್ದರು. ರಾಜ್ಯ ಸೇರಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಶ್ರೀ ಜಯತೀರ್ಥರ ಮೂಲ ವೃಂದಾವನದ ದರ್ಶನ ಪಡೆದು ಪುನೀತರಾದರು.
ಮುಂಬೈ ಶ್ರೀ ಸತ್ಯಧ್ಯಾನ ವಿದ್ಯಾಪಿಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಕನ್ನಡಿಕರಣ ಮಾಡಿದ ಶ್ರೀ ಜಯತೀರ್ಥರ ಭಗವದ್ಗೀತಾಭಾಷ್ಯ ಪ್ರಮೇಯ ದೀಪಿಕಾ ಗ್ರಂಥವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಬಳಿಕ ಶ್ರೀ ಜಯತೀರ್ಥರ ವ್ಯಕ್ತಿತ್ವ ಕೊಡುಗೆ ಮತ್ತು ವೈಷ್ಣವ ದೀಕ್ಷ ಹಾಗೂ ಗ್ರಂಥದ ಬಗ್ಗೆ ಉಪನ್ಯಾಸ ನೀಡಿದರು.
ತಿರುಮಲದಿಂದ ತರಲಾದ ಶ್ರೀ ಶ್ರೀನಿವಾಸದೇವರ ಶೇಷವಸವನ್ನು ವೈಭವದಿಂದ ಸ್ವಾಗತಿಸಿ, ಜಯತೀರ್ಥರ ಮೂಲವೃಂದಾವನ ಸನ್ನಿಧಾನಕ್ಕೆ ಶ್ರೀಗಳ ಮೂಲಕ ಸಮರ್ಪಿಸಲಾಯಿತು. ಮಳಖೇಡದ ಕಮಲಾಕರ ಕುಲಕರ್ಣಿ ರಚಿಸಿದ ದಾಸರು ಕಂಡ ಶ್ರೀ ಜಯತೀರ್ಥರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ತತ್ವವಾದ ಸಿದ್ಧಾಂತ ಶೈಕ್ಷಣಿಕ ಹಾಗೂ ವಿವಿಧೋದ್ದೇಶ ಟ್ರಸ್ಟ್ನಿಂದ ಮಳಖೇಡಕ್ಕೆ ಬರುವ ಹಿರಿಯ ನಾಗರಿಕರು ಹಾಗೂ ಅಶಕ್ತರಿಗೆ ಸಹಾಯವಾಗಲೆಂದು ವೀಲ್ ಚೇರ್ಗಳನ್ನು ಶ್ರೀಮಮಠಕ್ಕೆ ಸಮರ್ಪಿಸಲಾಯಿತು.
ಮಳಖೇಡದಲ್ಲಿ ಮಂಗಳವಾರ ಶ್ರೀ ಸತ್ಯಾತ್ಮ ತೀರ್ಥರ ಸಾನ್ನಿಧ್ಯದಲ್ಲಿ ಶ್ರೀ ಜಯತೀರ್ಥರ ಉತ್ತರಾರಾಧನೆ ನಡೆಯಲಿದೆ. ಶ್ರೀಗಳಿಂದ ಮುದ್ರಾಧಾರಣೆ, ಅನುಗ್ರಹ ಸಂದೇಶ, ಮೂಲ ರಾಮದೇವರ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಬಳಿಕ ಆವರಣದಲ್ಲಿ ಗಜವಾಹನ ನಡೆಯಲಿದೆ.
ಕಾಗಿಣೆ ನದಿಯಲ್ಲಿ ಮಿಂದೆಳುವುದರಿಂದ ಸರ್ವ ತೀರ್ಥಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂಬ ಪ್ರತಿತಿ ಇದೆ. ಹೀಗಾಗಿ ಅಪಾರ ಭಕ್ತರು ಪುಣ್ಯ ನದಿಯಲ್ಲಿ ಮುಳುಗೆದ್ದು ಪುನೀತರಾದರು. ನಸುಕಿನ ಜಾವದಿಂದಲೇ ತಂಡೋಪ ತಂಡವಾಗಿ ಭಕ್ತರು ನದಿಗೆ ಆಗಮಿಸಿ ಸ್ನಾನ ಮಾಡಿ ಜಯತೀರ್ಥರ ವೃಂದಾವನಕ್ಕೆ ಭಕ್ತಿಪೂರ್ವಕ ಪ್ರದಣೆ ಸೇವೆಗೈದರು.
ಪೂಜಾ ವೈಭವ ಕಣ್ತುಂಬಿಕೊಂಡ ಭಕ್ತರು
ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದ ಆವರಣದಲ್ಲಿ ಶ್ರೀ ಸತ್ಯಾತ್ಮ ತೀರ್ಥರಿಂದ ನಡೆಯುತ್ತಿದ್ದ ಶ್ರೀ ದಿಗ್ವಿಜಯ ಮೂಲ ರಾಮದೇವರ ಫೂಜೆ ವೈಭವವನ್ನು ಅಸಂಖ್ಯಾತ ಭಕ್ತರು ಕಣ್ತುಂಬಿಕೊಂಡರು. ಮೂಲ ವೃಂದಾವನದ ಸುತ್ತಲೂ ಭಕ್ತರು ಕುಳಿತು ಶ್ರದ್ಧೆಯಿಂದ ಪೂಜೆ ನೋಡಿದರು. ಕೆಲವರು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಮಾಡುತ್ತಿದ್ದರೆ, ಇನ್ನು ಕೆಲವರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಪಂಡಿತರಿಂದ ಮಂತ್ರೂಷ ಮೊಳಗಿದವು.
ಮೂಲ ವೃಂದಾವನಗಳಿಗೆ ಪುಷ್ಪಾಲಂಕಾರ
ಮಳಖೇಡದ ಕಾಗಿಣೆ ತಟದಲ್ಲಿರುವ ಉತ್ತರಾದಿ ಮಠದಲ್ಲಿ ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಹಾಗೂ ಶ್ರೀ ರುತ್ತಮ ತೀರ್ಥರ ಮೂಲಕ ವೃಂದಾವನಗಳಿಗೆ ಶ್ರೀ ಸತ್ಯಾತ್ಮತಿರ್ಥರ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ಟೀಕಾರಾಯರ ಮೂಲ ವೃಂದಾವನದ ಪುಷ್ಪಾಲಂಕಾರ ಕಣ್ಮನ ಸೆಳೆಯುವಂತಿತ್ತು. ಅಸಂಖ್ಯಾತ ಭಕ್ತರು ದರ್ಶನ ಪಡೆದು ಪುನೀತರಾದರು.
ಮಕ್ಕಳಿಗೆ ಧರ್ಮಾಚರಣೆ ಹೇಳಿಕೊಡಿ
ಯಾವುದೇ ಧರ್ಮ, ಸಿದ್ಧಾಂತ ಉಳಿಯಬೇಕಾದರೆ ಆಚರಣೆ ಅನುಷ್ಠಾನಕ್ಕೆ ತರಬೇಕು ಎಂದು ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು. ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವದಲ್ಲಿ ಅನುಗ್ರಹ ಸಂದೇಶ ನೀಡಿ, ಹಿಂದೂ ಧರ್ಮ ಹಾಗೂ ಸಿದ್ಧಾಂತ ಉಳಿಸಿಕೊಳ್ಳಬೇಕಾದರೆ ನಾವೆಲ್ಲರೂ ನಮ್ಮ ಆಚರಣೆಗಳನ್ನು ಅನುಷ್ಠಾನಕ್ಕೆ ತರಬೇಕು. ಪಾಲಕರು ಮಕ್ಕಳಿಗೆ ಧರ್ಮದ ಆಚರಣೆ ಕುರಿತು ಮಾಹಿತಿ ನೀಡಬೇಕು. ಉತ್ತಮ ಸಂಸ್ಕಾರ ನೀಡಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪ್ರತಿಪಾಧಿಸಿದರು.
ಶ್ರೀ ಟೀಕಾರಾಯರ ಪ್ರತಿ ವ್ಯಾಖ್ಯಾನ (ವಾಕ್ಯ) ಸ್ಮರಿಸಿದರೆ ಇಷ್ಟಾರ್ಥಗಳು ಈಡೇರುತ್ತದೆ, ಬದುಕಿಗೆ ಮೋಕ್ಷ ಸಿಗುತ್ತದೆ. ಗುರುಗಳು ಕಾಮಧೇನುವಿನಂತೆ, ಅವರ ಒಂದೊಂದು ವಾಕ್ಯಗಳು ಕೋಟಿ ಪುಣ್ಯಗಳಿಗೆ ಸಮನಾಗಿವೆ. ಭಗವಂತನ ಗುಣಗಳನ್ನು ಹೊಂದಿರುವ ಶ್ರೀ ಟೀಕಾಕೃತ್ಪಾದರ ರಚನೆಗಳು ಮಂಗಳಕರವಾಗಿವೆ.
— > ಶ್ರೀ ಸತ್ಯಾತ್ಮ ತೀರ್ಥರು, ಉತ್ತರಾದಿ ಮಠ