ಯಡವನಹಳ್ಳಿ ಗ್ರಾಮ ಸರ್ಕಾರ ಸ್ಥಾಪನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಗತಿಪರ ಚಿಂತಕ ಕುಮಾರ್ ಕೊಪ್ಪ ಮಾತನಾಡಿದರು. ಸಿ.ಎಂ.ಕ್ರಾಂತಿಸಿಂಹ, ಎಚ್.ಶಂಕರ್, ವಿ.ಜಗದೀಶ್, ಕೃಷ್ಣಪ್ಪ, ತಿರುಮಲಸ್ವಾಮಿ ಇದ್ದರು.
ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಯಡವನಹಳ್ಳಿ ಗ್ರಾಮದ ಸಾಮಾಜಿಕ, ಶೈಕ್ಷಣಿಕ, ಕೃಷಿ, ಹೈನುಗಾರಿಕೆ, ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ, ಗೃಹ ಕೈಗಾರಿಕೆ ಹಾಗೂ ಇತರೆ ಸಮಾಜದ ಎಲ್ಲಾ ಸ್ಥರಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಯಡವನಹಳ್ಳಿ ಗ್ರಾಮ ಸರ್ಕಾರ ಆಸ್ಥಿತ್ವಕ್ಕೆ ಬಂದಿದೆ ಎಂದು ಸಾಹಿತಿ ಸಿ.ಎಂ.ಕ್ರಾಂತಿಸಿಂಹ ತಿಳಿಸಿದರು.
ಗ್ರಾಮದಲ್ಲಿ ಭಾನುವಾರ ನಡೆದ ನಮ್ಮ ಗ್ರಾಮದ ಜನತೆಯ ಸಮಗ್ರ ಸೇವೆ ಅಭಿವೃದ್ಧಿ ಮತ್ತು ಅಭ್ಯುದಯಕ್ಕಾಗಿ ಯಡವನಹಳ್ಳಿ ಗ್ರಾಮ ಸರ್ಕಾರ ಸ್ಥಾಪನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಭಂದಲ್ಲಿ ಗ್ರಾಮ ಸರ್ಕಾರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದರು.
ಗ್ರಾಮದ ಸಮಗ್ರ ಅಭಿವೃದ್ಧಿಯಾಗಬೇಕು ಎಂಬ ಚಿಂತನೆಯೊಂದಿಗೆ ಗ್ರಾಮದ ಆಸಕ್ತಿದಾಯಕ ಯುವ ಮನಸುಗಳೊಂದಿಗೆ ಹಲವಾರು ಬಾರಿ ಚರ್ಚೆ ಮಾಡಿ ಎಲ್ಲರ ಆಶಯದಂತೆ ಈ ದಿನ ಗ್ರಾಮ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಎಂದರು.
ಸದರಿ ಸರ್ಕಾರ ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ, ವಿರೋಧ ಇಲ್ಲದೆ ಧರ್ಮ ಮತ್ತು ಜಾತ್ಯತೀತವಾಗಿ ರಾಜಕೀಯರಹಿತವಾಗಿ ಕೇವಲ ಗ್ರಾಮದ ಭಾವೈಕ್ಯತೆ ಮತ್ತು ಅಭಿವೃದ್ಧಿಯ ಮಂತ್ರದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾ ಮನೋಭಾವದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡಲು ನಮ್ಮ ಗ್ರಾಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಗ್ರಾಮ ಸರ್ಕಾರದ ಎಲ್ಲಾ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ ಪ್ರಗತಿಪರ ಚಿಂತಕ ಕುಮಾರ್ ಕೊಪ್ಪ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆಶಯಗಳ ಅಡಿಯಲ್ಲಿ ಯಡವನಹಳ್ಳಿ ಗ್ರಾಮ ಸರ್ಕಾರದ ಎಲ್ಲ ಸಚಿವರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಕನ್ನಡ-ಇಂಗ್ಲಿಷ್ ನಿಘಂಟು, ರೈತರಿಗೆ ತೆಂಗಿನ ಸಸಿ ವಿತರಿಸಲಾಯಿತು. ಗ್ರಾಮದ ಮಹಿಳೆಯರು, ಯುವಜನರು, ಸಮಸ್ತ ಗ್ರಾಮಸ್ಥರು ಕಾರ್ಯಕ್ರಮವನ್ನು ಸಾಕ್ಷಿಕರಿಸಿದರು.
ಕುಮಾರ್‌ಕೊಪ್ಪರವರ ಸಭಾಧ್ಯಕ್ಷತೆಯಲ್ಲಿ ಗ್ರಾಮಾಧ್ಯಕ್ಷರಾಗಿ, ಉಪ ಗ್ರಾಮಾಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಎಲ್ಲ ಲೋಕಸಭಾ ಸದಸ್ಯರು ಸಭೆಯಲ್ಲಿ ಸರ್ಕಾರದ ನಾಯಕರಾಗಿ ಸಿ.ಎಂ.ಕ್ರಾಂತಿಸಿಂಹ ಅವರನ್ನು ಪ್ರಧಾನಮಂತ್ರಿಯಾಗಿ ಸರ್ವಾನುಮತದಿಂದ ಸೂಚಿಸಿ ನಂತರ ಅವರವರ ಇಚ್ಚೆಗನುಗುಣವಾಗಿ ವಿವಿಧ ಖಾತೆಯ ಸಚಿವರನ್ನು ನೇಮಿಸಲಾಯಿತು.
ಮಂತ್ರಿಮಂಡಲ: ಸಿ.ಎಂ.ಕ್ರಾಂತಿಸಿಂಹ ಅವರಿಗೆ ಪ್ರಧಾನ ಮಂತ್ರಿ, ಹಣಕಾಸು, ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಮತ್ತು ಪ್ರಚಾರ ಹಾಗೂ ಹಂಚಿಕೆಯಾಗದ ಇತರೆ ಖಾತೆಗಳು. ಸಿ.ಕೃಷ್ಣಪ್ಪ ಉಪ ಪ್ರಧಾನ ಮಂತ್ರಿ, ಗೃಹ ಆಹಾರ ಮತ್ತು ನಾಗರಿಕ ಪೂರೈಕೆ, ಎಂ.ಸಂತೋಷ್ ವಿದೇಶಾಂಗ ಇಂಧನ ಮತ್ತು ಕೈಗಾರಿಕೆ, ತಿರುಮಲಸ್ವಾಮಿ ಸಮಾಜ ಕಲ್ಯಾಣ, ಸಿ.ಪುಟ್ಟರಾಜು ಶಿಕ್ಷಣ, ಚಂದ್ರಶೇಖರ್ ಸಾರಿಗೆ, ಎಚ್.ವೀರಭದ್ರೇಗೌಡ ವಸತಿ ಮತ್ತು ಪ್ರವಾಸೋದ್ಯಮ, ಆರ್.ಕೆಂಪರಾಜು ಲೋಕೋಪಯೋಗಿ ಮತ್ತು ಜಲಸಂಪನ್ಮೂಲ, ನಾಗಮ್ಮ ಧರ್ಮಪಾಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಡಿ.ಮಹೇಂದ್ರ ಕಂದಾಯ, ಸುರೇಶಾಚಾರ್ ಕರಕುಶಲ ಮತ್ತು ಕೌಶಲಾಭಿವೃದ್ಧಿ, ಟಿ.ಚಂದ್ರಶೇಖರ್ ಕಾರ್ಮಿಕ, ಆರ್.ರಮೇಶ್ ಸ್ವಯಂಸೇವೆ, ಸ್ವಚ್ಛತೆ, ಸಕ್ಕರೆ ಮತ್ತು ಅಂತರ್ಜಲ ಅಭಿವೃದ್ಧಿ, ಎನ್.ಪ್ರದೀಪ್ ವಾಣಿಜ್ಯ, ಸಿ.ಮನೋಜ್ ಕೆರೆಕಟ್ಟೆ ಅಭಿವೃದ್ಧಿ ಮತ್ತು ಮೀನುಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇನ್ನುಳಿದ ಖಾತೆಗಳನ್ನು ಸಂಪುಟ ಪುನರ್ ರಚನೆಯ ವೇಳೆಯಲ್ಲಿ ವಿಸ್ತರಿಸಲಾಗುವುದು ಎಂದು ಗ್ರಾಮ ಸಿ.ಎಂ.ಕ್ರಾಂತಿಸಿಂಹ ವಿವರಿಸಿದರು.