ಅಬಕಾರಿ ಆಯುಕ್ತ ವೈ. ಮಂಜುನಾಥ್
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಬೆಳಗಾವಿ ವಿಭಾಗದ ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಅವರ ಭ್ರಷ್ಟಾಚಾರವೂ ಬಗೆದಷ್ಟೂ ಬಟಬಯಲಾಗುತ್ತಿದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ವಿಭಾಗದಲ್ಲಿ ಒಂದೊಂದು ಜಂಟಿ ಆಯುಕ್ತರ ಹುದ್ದೆಗಳಿವೆ. ಈ ಹುದ್ದೆ ಕೆಳಗಡೆ ಹೆಚ್ಚುವರಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಹೆಚ್ಚುವರಿ ಅಬಕಾರಿ ಆಯುಕ್ತ ಹುದ್ದೆ ಇತ್ತು. ಆದರೆ, 2 ವರ್ಷದ ಹಿಂದೆ ವೈ. ಮಂಜುನಾಥ್, ಸರ್ಕಾರದ ಮಟ್ಟದಲ್ಲಿ ಜಾತಿ ಮತ್ತು ಹಣ ಪ್ರಬಾವ ಬಳಸಿ ಬೆಳಗಾವಿ ವಿಭಾಗಕ್ಕೆ ಹೊಸದಾಗಿ ಹೆಚ್ಚುವರಿ ಅಬಕಾರಿ ಆಯುಕ್ತ ಹುದ್ದೆ ಸೃಜಿಸಿ, ಆ ಹುದ್ದೆಯಲ್ಲಿ ಕಾರ್ಯಭಾರ ನಡೆಸಿ ಭ್ರಷ್ಟಾಚಾರ ಮೂಲಕ ಕೋಟ್ಯಂತರ ರೂ.ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಬಗ್ಗೆ ಗಂಭೀರ ಆರೋಪಗಳಿವೆ.
ಬೆಂಗಳೂರು ಬದಲು ಬೆಳಗಾವಿಯನ್ನೇ ಅವರು ಕೇಂದ್ರಸ್ಥಾನ ಮಾಡಿಕೊಂಡು ಅಂಧಾದರ್ಬಾರ್ ನಡೆಸುತ್ತಿದ್ದರು.ಈ ಹುದ್ದೆಗೆ ಕುಳಿತುಕೊಳ್ಳಲು ಅರ್ಹತೆ ಇಲ್ಲದಿದ್ದರೂ ನಿಯಮಬಾಹಿರವಾಗಿ ಮಂಜುನಾಥ್, ಕಾರ್ಯನಿರ್ವಹಿಸುತ್ತ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಥವಾ ಅವರ ನಿಯಂತ್ರಣದಲ್ಲಿರುವ ಸಂಸ್ಥೆಗಳ ಹೆಸರಿನಲ್ಲಿ ಮದ್ಯದ ಪರವಾನಗಿ ಪಡೆದು ಕಾನೂನುಬಾಹಿರವಾಗಿ ಮದ್ಯದ ವ್ಯವಹಾರ ನಡೆಸುತ್ತಿದ್ದರು. ಈ ಅಕ್ರಮ ವ್ಯವಹಾರಗಳಿಂದ ಬರುವ ಕಪ್ಪು ಹಣವನ್ನು ಕಾನೂನುಬದ್ಧ ವ್ಯವಹಾರದ ಆದಾಯ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಜಾರಿ ನಿರ್ದೇಶನಾಲಯ(ಇಡಿ), ನಡೆಸಿದ್ದ ದಾಳಿಯಲ್ಲಿ ಮಂಜುನಾಥ್ ಹೇಗೆಲ್ಲಾ ಭ್ರಷ್ಟಾಚಾರ ನಡೆಸುತ್ತಿರುವುದು ಸಾಬೀತಾಗಿದೆ.
ಅಬಕಾರಿ ಹೆಚ್ಚುವರಿ ಆಯುಕ್ತ(ಐಎಂಎಲ್), ಅಬಕಾರಿ ಜಂಟಿ ಆಯುಕ್ತ (ಐಎಂಎಲ್) ಸೇರಿ ಇತರ ಪ್ರಮುಖ ಹುದ್ದೆಗಳಲ್ಲಿ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಬಕಾರಿ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತ(ಆಡಳಿತ) ಹುದ್ದೆಯಲ್ಲಿ ಕೆಎಎಸ್ ಅಧಿಕಾರಿ ಕೆ.ಎಂ. ಸುರೇಶ್‌ಕುಮಾರ್ ಮತ್ತು ಹೆಚ್ಚುವರಿ ಅಬಕಾರಿ ಆಯುಕ್ತ (ಪ್ರಧಾನ ಕಚೇರಿ ಮತ್ತು ತಪಾಸಣೆ) ಹುದ್ದೆಯಲ್ಲಿ ಬಸವರಾಜ್ ಆರ್.ಸೋಮಣ್ಣನವರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಕೆಎಎಸ್ ಅಧಿಕಾರಿಗಳು ಎಲ್ಲ ಅಬಕಾರಿ ಉಪ ಆಯುಕ್ತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.
ಇಲಾಖೆಯ ಬಹುತೇಕ ಹಿರಿಯ ಅಧಿಕಾರಿಗಳು ವ್ಯವಸ್ಥಿತ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಉಪ ಆಯುಕ್ತರು, ಅಧೀಕ್ಷಕರು, ಉಪ ಅಧೀಕ್ಷಕರು ಮತ್ತು ನಿರೀಕ್ಷಕರು ಜಿಲ್ಲಾ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದರೆ, ಜಂಟಿ ಆಯುಕ್ತ, ಹೆಚ್ಚುವರಿ ಅಬಕಾರಿ ಆಯುಕ್ತ ರಾಜ್ಯಮಟ್ಟದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ. ಇಲಾಖೆಯ ಆಯುಕ್ತರು, ಕಾರ್ಯದರ್ಶಿ ಮತ್ತು ಸಚಿವರ ಹಂತದ ಕಾರ್ಯಚಟುವಟಿಕೆಗಳ ವ್ಯವಹಾರದಲ್ಲಿ ಕೆಲಸ ಮಾಡುತ್ತಾರೆ. ಇವರೆಲ್ಲರೂ ಪ್ರಭಾವಿ ಅಧಿಕಾರಿಗಳಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 100 ಕೋಟಿ ರೂ.ಗಿಂತ ಅಧಿಕ ಮೊತ್ತದ ಭ್ರಷ್ಟಾಚಾರ ಸಂಬಂಧಿಸಿದಂತೆ ಅಮಾನತ್ತು ಆಗಿದ್ದ ಕೆಎಎಎಸ್ ಅಧಿಕಾರಿಯೊಬ್ಬರು, ಹೆಚ್ಚುವರಿ ಆಯುಕ್ತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಲಾಖೆಯಲ್ಲಿ ಅನಗತ್ಯವಾಗಿ ಹೆಚ್ಚುವರಿ ಆಯುಕ್ತ, ಹೆಚ್ಚುವರಿ ಅಬಕಾರಿ ಆಯುಕ್ತ, ಜಂಟಿ ಆಯುಕ್ತ ಹುದ್ದೆಗಳನ್ನು ಸೃಜಿಸಲಾಗಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬೊಬ್ಬ ಅಧಿಕಾರಿಗೆ ಲಕ್ಷಾಂತರ ರೂ. ವೇತನ ಸೇರಿ ಸರ್ಕಾರದಿಂದ ಆಡಳಿತ ಸೌಲಭ್ಯ ಸಿಗುತ್ತಿದೆ. ಹಾಗಾಗಿ, ಆದರೆ, ಅನಗತ್ಯವಾಗಿ ಸೃಜಿಸಿರುವ ಇಂತಹ ಹುದ್ದೆಗಳನ್ನು ರದ್ದುಮಾಡುವ ಅಗತ್ಯವಿದೆ. ಅಲ್ಲದೆ, ಇಲಾಖೆಯ ಆಯುಕ್ತರ ಹುದ್ದೆಗೆ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕಿದೆ. ಅಪರಾಧ ತಡೆಯುವ ಬಗ್ಗೆ ಅಧಿಕ ಜ್ಞಾನ ಇರುವುದರಿಂದ ಅವರಿಗೆ ಇಲಾಖೆಯ ಸುಧಾರಣೆಗೆ ತರಬಹುದು.
ಅಬಕಾರಿಯಲ್ಲಿ ತರಹೇವಾರಿ ಭ್ರಷ್ಟಾಚಾರ ಪತ್ತೆ:
ಭ್ರಷ್ಟಾಚಾರ, ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ), ಹೆಚ್ಚುವರಿ ಅಬಕಾರಿ ಆಯುಕ್ತ ವೈ.ಡಿ.ಮಂಜುನಾಥ್ ಅವರ ನಿವಾಸ, ವಾಹನ ಚಾಲಕ, ಕುಟುಂಬದ ಸದಸ್ಯರು ಹಾಗೂ ಅವರ ಆಪ್ತರಿಗೆ ಸೇರಿದ ವಿವಿಧ ನಿವಾಸ ಮತ್ತು ಕಚೇರಿಗಳ ಮೇಲೆ ನಡೆಸಿದ್ದ ದಾಳಿಯಲ್ಲಿ 5.5 ಕೋಟಿ ರೂ.ನಗದು ಸೇರಿ 13.35 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹೇಗೆಲ್ಲಾ ಭ್ರಷ್ಟಾಚಾರ ನಡೆಸಿ ಅಕ್ರಮವಾಗಿ ಹಣ ಮಾಡುತ್ತಿರುವುದು ಪತ್ತೆಯಾಯಿತು. ಲಂಚ ವಸೂಲಿ, ಮನಿ ಲಾಂಡರಿಂಗ್‌ಗಾಗಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನೊಳಗೊಂಡ ಸಂಘಟಿತ ಜಾಲವೇ ಸಕ್ರಿಯವಾಗಿತ್ತು. ಮಾಸಿಕ ಲಂಚದ ವ್ಯವಸ್ಥೆ, ಕುಟುಂಬದವರ ಹೆಸರಲ್ಲಿ ಮದ್ಯದ ವ್ಯಾಪಾರ ಸೇರಿ ಇತರ ಅಕ್ರಮಗಳು ಬಯಲಾಯಿತು. ವಿವಿಧ ಮದ್ಯದ ಅಂಗಡಿಗಳಿಂದ ಕ್ಷೇತ್ರ ಅಧಿಕಾರಿಗಳಿಗೆ ಪ್ರತಿ ತಿಂಗಳು ನಿಗದಿತ ಲಂಚದ ಹಣ ಸಂದಾಯವಾಗುತ್ತಿರುವುದು, ಪರವಾನಗಿ ನವೀಕರಣ, ಸ್ಥಳಾಂತರ ಮತ್ತು ಹೊಸ ಲೈಸೆನ್ಸ್ ನೀಡುವಾಗ ಸಂಗ್ರಹವಾಗುವ ಈ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ಒಂದೆಡೆ ಸೇರಿಸಿ ಹಂಚಿಕೆ ಮಾಡಲಾಗುತ್ತಿರುವುದು ಇಡಿ ತನಿಖೆಯಲ್ಲಿ ಕಂಡುಬಂದಿದೆ.