ಬೆಂಗಳೂರು: ಇತ್ತೀಚೆಗೆ ವಿಶ್ವ ದರ್ಜೆಯ ಪ್ರತಿಷ್ಠಿತ ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇಆ್ ಪಂದ್ಯಗಳ ಆತಿಥ್ಯ ವಹಿಸಿದ್ದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಮತ್ತೊಂದು ಅಂತಾರಾಷ್ಟ್ರೀಯ ಟೂರ್ನಿಯ ಆಯೋಜನೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ವರ್ಲ್ಡ್ ಟೆನಿಸ್ ಲೀಗ್ (ಡಬ್ಲ್ಯುಟಿಎ) 4ನೇ ಆವೃತ್ತಿಗೆ ಭಾರತ ಆತಿಥ್ಯ ವಹಿಸಲಿದ್ದು, ಮೂರು ಆವೃತ್ತಿಗಳ ಬಳಿಕ ಯುಎಇಯಿಂದ ಹೊರಗಡೆ ಟೂರ್ನಿ ನಿಗದಿಯಾಗಿದೆ.
ಡಿಸೆಂಬರ್ 17ರಿಂದ 20ರವರೆಗೆ ಕಬ್ಬನ್ ಪಾರ್ಕ್‌ನ ಎಸ್.ಎಂ. ಕೃಷ್ಣ ಟೆನಿಸ್ ಸ್ಟ್ರೇಡಿಯಂನಲ್ಲಿ ನಡೆಯಲಿದ್ದು, 2022ರಲ್ಲಿ ಆರಂಭಗೊಂಡ ಟೂರ್ನಿಯಲ್ಲಿ ಒಟ್ಟು 4 ತಂಡಗಳು ಭಾಗವಹಿಸಲಿವೆ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಪ್ರತಿ ಪಂದ್ಯವೂ ಪುರುಷರ ಸಿಂಗಲ್ಸ್, ಡಬಲ್ಸ್ ಹಾಗೂ ಮಹಿಳೆಯರ ಸಿಂಗಲ್ಸ್, ಡಬಲ್ಸ್ ಪಂದ್ಯಗಳನ್ನು ಒಳಗೊಂಡಿರಲಿದೆ. ಟಾಸ್ ಗೆದ್ದ ತಂಡ ಮಿಶ್ರ ಡಬಲ್ಸ್ ಅಥವಾ ಡಬಲ್ಸ್ ಎಂಬ ಆಯ್ಕೆ ಮಾಡಬಹುದಾಗಿದೆ. ರೌಂಡ್ ರಾಬಿನ್ ಬಳಿಕ ಅತಿ ಹೆಚ್ಚು ಗೇಮ್‌ಗಳನ್ನು ಗೆದ್ದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಭಾರತದ ಟೆನಿಸ್ ಸಂಸ್ಕೃತಿಯ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಡಬ್ಲುೃಟಿಎ ಮೂಲಕ ಭಾರತದಲ್ಲಿ ಪದಾರ್ಪಣೆ ಮಾಡುತ್ತಿರುವುದು ತುಂಬ ಸಂತಸ. ಈ ಲೀಗ್‌ನ ವಿನೂತನ ಸ್ವರೂಪ ಬಹಳ ರೋಚಕವಾಗಿದ್ದು, ತಂಡದೊಂದಿಗೆ ಕೋರ್ಟ್‌ನಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಎದುರು ನೋಡುತ್ತೇನೆ ಎಂದು ವಿಶ್ವ ನಂ. 5 ಹಾಗೂ 2022ರ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಕಿನಾ ಸಂತಸ ವ್ಯಕ್ತಪಡಿಸಿದ್ದಾರೆ.
ಆತಿಥೇಯ ಭಾರತದ ಉದಯೋನ್ಮುಖ ಹಾಗೂ ಅನುಭವಿ ತಾರೆಯರ ಜತೆಗೆ ವಿದೇಶಿ ಆಟಗಾರರನ್ನು ಕಣ್ತುಂಬಿಕೊಳ್ಳುವ ಅವಕಾಶ ಉದ್ಯಾನನಗರಿಯ ಟೆನಿಸ್ ಪ್ರಿಯರಿಗೆ ಈ ಲೀಗ್ ಒದಗಿಸಲಿದೆ. ವಿಶ್ವದ ಮಾಜಿ ನಂ.1 ಹಾಗೂ 2021ರ ಯುಎಸ್ ಓಪನ್ ಗ್ರಾಂಡ್ ಸ್ಲಾಂ ವಿಜೇತ ರಷ್ಯಾದ ಡೇನಿಯಲ್ ಮೆಡ್ವೆಡೇವ್, 2022ರ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಕಿನಾ, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್, ಪೌಲಾ ಬಡೋಸಾ, ಕನ್ನಡಿಗ ರೋಹನ್ ಬೋಪಣ್ಣ, ಆರ್ಥರ್ ಫಿಲ್ಸ್, ಸುಮಿತ್ ನಗಾಲ್, ಗೇಲ್ ಮೂನಿಫೀಲ್ಸ್, ಮ್ಯಾಗ್ಡಾ ಲಿನೆಟ್ ಮತ್ತು ಮಾರ್ಟಾ ಕೋಸ್ಟ್ಯುಕ್ ಸಹಿತ ಹಲವು ತಾರೆಯರು ಭಾಗವಹಿಸಲಿದ್ದಾರೆ. ಭಾರತದ ಯೂಕಿ ಭಾಂಬ್ರಿ, ಅಂಕಿತಾ ರೈನಾ, ಶ್ರೀವಲ್ಲಿ ಭಾಮಿಡಿಪಟಿ, ಮಾಯಾ ರೇವತಿ, ದಕ್ಷಿಣೇಶ್ವರ ಸುರೇಶ್ ಮತ್ತು ಶಿವಿಕಾ ಬರ್ಮನ್ ಸಹ ಕಾಣಿಸಿಕೊಳ್ಳಲಿದ್ದಾರೆ.
ಭಾರತವು ಟೆನಿಸ್‌ನೊಂದಿಗೆ ಸದಾ ಗಾಢ ಮತ್ತು ಶಾಶ್ವತ ಸಂಬಂಧ ಹೊಂದಿದೆ. ವರ್ಲ್ಡ್ ಟೆನಿಸ್ ಲೀಗ್ ಭಾರತದಲ್ಲಿ ನಡೆಯುವುದು ಆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶ ಹೊಂದಿದೆ. ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ಮತ್ತು ಭಾರತದ ಶ್ರೇಷ್ಠ ಪ್ರತಿಭೆಗಳು ಒಂದೇ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಮುಂದಿನ ತಲೆಮಾರಿನ ಆಟಗಾರರನ್ನು ಪ್ರೇರೇಪಿಸಲು ನಾವು ಬಯಸುತ್ತೇವೆ.