ಬೆಂಗಳೂರು: ವಿಶ್ವ ಅಂಚೆ ದಿನಾಚರಣೆ ಪ್ರಯುಕ್ತ ಅ.9ರಿಂದ 15ರವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರಿಗೆ ಜನಸ್ನೇಹಿ ಸೇವೆ ಒದಗಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ಸ್ವಾತಿ ಪಾಂಡೆ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1874ರಲ್ಲಿ ಅಂಚೆ ಒಕ್ಕೂಟ ಸ್ಥಾಪನೆಯಾದ ನೆನಪಿಗಾಗಿ ವಿಶ್ವ ಅಂಚೆ ದಿನ ಆಚರಣೆ ಮಾಡಲಾಗುತ್ತಿದೆ. ಜಾಗತಿಕ ಸಂಪರ್ಕ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಪ್ರೇರಕ ಶಕ್ತಿಗಳಾಗಿ ಅಂಚೆ ಜಾಲದ ಮಹತ್ವವನ್ನು ಸಾರಲಾಗುವುದು. ಇದೇ ವೇಳೆ ಅಂಚೆ ಸೇವೆಗಳ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿನ 867 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಯಲ್ಲಿ 2026 ಸೆಪ್ಟೆಂಬರ್ವರೆಗೂ 8,13,423 ವಹಿವಾಟುಗಳನ್ನು ನಿರ್ವಹಿಸಿದೆ. ಪಾಸ್ಪೋರ್ಟ್ ಸೇವಾ ಕೇಂದ್ರದ ಮೂಲಕ 1,38,194 ಅರ್ಜಿಗಳನ್ನು ವಿಲೇ ಮಾಡಿ ಹಂಚಿಕೆ ಮಾಡಲಾಗಿದೆ. ಸ್ಪೀಡ್ ಪೋಸ್ಟ್ ದಾಖಲೆ ಸೇವೆಗಳು ಜನಮನ್ನಣೆ ಪಡೆದುಕೊಂಡಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಸಪ್ತಾಹದ ಅವಧಿಯಲ್ಲಿ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಇಲಾಖೆಯ ಮತ್ತಷ್ಟು ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಆ ಮೂಲಕ ಗ್ರಾಹಕಸ್ನೇಹಿ ಆಡಳಿತವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದರು.
ಸಪ್ತಾಹದ ವಿವರ:
ಅ.9ರಂದು ಅಂಚೆ ಕಚೇರಿಗಳಲ್ಲಿ ರಾಷ್ಟ್ರೀಯ ಅಂಚೆ ಸಪ್ತಾಹದ ಗುರುತು ಮತ್ತು ಪ್ರಚಾರ ಸಾಮಗ್ರಿಗಳ ಪ್ರದರ್ಶನ, ಡಿಜಿಟಲ್ ಪ್ರಚಾರ ಅಭಿಯಾನ ಅನುಷ್ಠಾನಕ್ಕೆ ತರುವುದು. ಅ.10 ಮತ್ತು 11ರಂದು ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಬೆಳಗಾವಿಯ ನಾಲ್ಕು ಫಿಲಾಟೆಲಿ ಬ್ಯೂರೋಗಳಲ್ಲಿ ಮೈ ಸ್ಟಾಂಪ್ ಕೌಂಟರ್‌ಗಳ ಜತೆಗೆ ಫಿಲಾಟೆಲಿ ಪಾಸ್ ಪೋರ್ಟ್ ಮಾರಾಟ ಆಯೋಜಿಸುವುದು ಎಂದು ಮಾಹಿತಿ ನೀಡಿದರು.
ಅ.12ರಂದು ಅಂಚೆ ಚೀಟಿ ಸಂಗ್ರಹಣಾ ದಿನ ಆಚರಣೆ, ಅ.13ರಂದು ಹಣಕಾಸು ಒಳಗೊಳ್ಳುವಿಕೆ ಮತ್ತು ನಾಗರಿಕ ಕೇಂದ್ರ ಸೇವೆಗಳ ದಿನ ಆಚರಿಸುವುದು, ಅ.14ರಂದು ಅಂಚೆ ಮತ್ತು ಪಾರ್ಸೆಲ್ ದಿನ ಹಾಗೂ ಅ.15ರಂದು ತಂತ್ರಜ್ಞಾನ ಮತ್ತು ನಾವೀನ್ಯತೆ ದಿನ ಆಯೋಜನೆ ಮಾಡಲಾಗುವುದು ಎಂದು ವಿವರಿಸಿದರು.
ಸಪ್ತಾಹದ ಅವಧಿಯಲ್ಲಿ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಇಲಾಖೆಯ ಮತ್ತಷ್ಟು ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಆ ಮೂಲಕ ಗ್ರಾಹಕಸ್ನೇಹಿ ಆಡಳಿತವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದರು.
ಡೈಲೆಕ್ಟರ್ ಪೋಸ್ಟ್ ಸೂಪರ್ಡೆಂಟ್ಗಳಾದ ಸಂದೇಶ್ ಮಹದೇವಪ್ಪ, ಚಂದ್ರಕಾಂತ ಕಾಮತ್, ತಾರ ಇದ್ದರು.