ಮಹಾಲಿಂಗಪುರದ ರಾಜ್ಯ ನೇಕಾರ ಸೇವಾ ಸಂಘದ ಕೇಂದ್ರ ಕಚೇರಿಯಲ್ಲಿ ಜರುಗಿದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಆಮ್ ಆದ್ಮಿ ಪಕ್ಷದ ತೇರದಾಳ ಮತಕ್ಷೇತ್ರದ ಮುಖಂಡ ಅರ್ಜುನ ಹಲಗಿಗೌಡರ ಉದ್ಘಾಟಿಸಿದರು. ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ, ಪೈಗಂಬರ ಪೆಂಡಾರಿ ಇತರರಿದ್ದರು.
- ಅರ್ಜುನ ಹಲಗಿಗೌಡರ ಹೇಳಿಕೆ
- ಕಾರ್ಮಿಕ ದಿನ ಆಚರಣೆ
ಮಹಾಲಿಂಗಪುರ: ನಿತ್ಯ ಬೆವರು ಹರಿಸಿ ದುಡಿಯುವ ಕಾರ್ಮಿಕರು ದೇಶದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮಾನತೆ ಸಾಧಿಸಲು ಅವರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿ ದೇಶದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ತೇರದಾಳ ಮತಕ್ಷೇತ್ರದ ಮುಖಂಡ ಅರ್ಜುನ ಹಲಗಿಗೌಡರ ಹೇಳಿದರು.
ಪಟ್ಟಣದ ಜಯಲಕ್ಷ್ಮೀ ನಗರದಲ್ಲಿರುವ ರಾಜ್ಯ ನೇಕಾರ ಸೇವಾ ಸಂಘದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿನ ಕಾಯಕವೆಲ್ಲವೂ ಪೂಜ್ಯನೀಯ. ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಎಂದು ಹೇಳಿದರು.
ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಕಾರ್ಮಿಕರು ಒಗ್ಗಟ್ಟಿನಿಂದ ಇದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಹೊಂದಿರಬೇಕು. ಅದಕ್ಕಾಗಿ ನಮ್ಮ ಕಚೇರಿಯಲ್ಲಿ ಅನೇಕ ಬಾರಿ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಿ ಕಾರ್ಮಿಕರಿಗೆ ಮಾಹಿತಿ ನೀಡಲಾಗಿದ್ದು ಈ ಕಾರ್ಯ ಮುಂದೆಯೂ ಕೂಡ ನಡೆಯುತ್ತದೆ. ಕಾರ್ಮಿಕರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪೈಗಂಬರ ಪೆಂಡಾರಿ, ಸದಾಶಿವ ಗೊಂದಕರ, ಮನೋಹರ ಕಲಾಲ, ರವಿ ಜವಳಗಿ, ಮಹೇಶ ಮನ್ನಯ್ಯನವರಮಠ, ರಾಜೇಂದ್ರ ಮಿರ್ಜಿ, ಲಾಲಸಾಬ ನಚಾರ್ಚಿ, ಸಂಗಪ್ಪ ಉದಗಟ್ಟಿ, ರಾಜು ಕುಕ್ಕುಗೋಳ, ರಾಘು ಬೆಳಗಲಿ, ರಾಜು ಹನಗಂಡಿ, ರಮೇಶ ನಾಗರಾಳ, ಬಸವರಾಜ ಜಮಖಂಡಿ ಇತರರಿದ್ದರು.