ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಮುಖಂಡರಾದ ಸಂಜೀವ ಐಹೊಳಿ, ಮಳುಗೌಡ ಪಾಟೀಲ, ಭೀಮನಗೌಡ ಬಿರಾದಾರ ಇತರರಿದ್ದಾರೆ. 
ರಾಜ್ಯ

ಕಾರ್ಯಕರ್ತರೇ ಪಕ್ಷದ ಜೀವಾಳ

ಪ್ರಮುಖ ಮುಖ್ಯಾಂಶಗಳು

  • ಜಿಗಜಿಣಗಿ ಭಾವುಕ ನುಡಿ
  • ರಾಜಕೀಯ ಜೀವನದ ಮೆಲುಕು
  • 48 ವರ್ಷ ಕೈ ಹಿಡಿದ ಜನರ ಬೆಂಬಲ ಸ್ಮರಣೆ
ವಿಜಯಪುರ: ‘ಅತ್ಯಂತ ಕೆಳಮಟ್ಟದಿಂದ, ಶೋಷಿತ ಸಮುದಾಯದ ವ್ಯಕ್ತಿಯೋರ್ವ 48 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದಾನೆಂದರೆ ಅದು ಸಾಮಾನ್ಯ ಸಂಗತಿಯಲ್ಲ, ಹಳ್ಳಿಗಾಡಿನಿಂದ ಬಂದು ಸುದೀರ್ಘ ರಾಜಕೀಯ ಜೀವನದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸ್ವಭಾವವೇ ನನ್ನನಿಂದು ಈ ಮಟ್ಟಿಗೆ ತಂದು ನಿಲ್ಲಿಸಿದೆ, ಇಷ್ಟು ವರ್ಷ ಬೆಂಬಲಿಸಿ ಬೆಳೆಸಿದ ಕಾರ್ಯಕರ್ತರ ಋಣ ತೀರಿಸಲಾಗದು’ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾದರು.
ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ಶುಕ್ರವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ‘ವಿಬಿ ಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮ’ದ ಉದ್ಘಾಟನೆ ನೆರವೇರಿಸಿ ರಾಜಕೀಯ ಜೀವನದ ಮೆಲಕು ಹಾಕಿದ ಜಿಗಜಿಣಗಿ ಅವರು, ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನೀಡಿದ್ದೇನೆ. ನನ್ನ ಜೀವನ ಕನ್ನಡಿಯಷ್ಟೇ ಪಾರದರ್ಶಕ. ಸರಳತೆಯಿಂದ, ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದೇನೆ. ಪಕ್ಷದ ಕಾರ್ಯಕರ್ತರೇ ನನ್ನ ಜೀವಾಳ. ಅವರ ಕೂದಲು ಕೊಂಕಾಗಲು ಎಂದಿಗೂ ಬಿಡಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ರಾಮಣ್ಣನ ಸರ್ಕಾರ ಆ ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ. ದಲಿತರಿಗೆ ಮೀಸಲಿಟ್ಟ ಅನುದಾನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದೀಗ ಹಳ್ಳಿಗಳ ಸರ್ವಾಂಗೀಣ ಪ್ರಗತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಜನ ಕಾಂಗ್ರೆಸ್‌ನ ಸುಳ್ಳುಗಳನ್ನು ನಂಬಬಾರದು. ವಿಬಿ ಜಿ ರಾಮ್ ಜಿ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿ ಎಂದರು.
ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಶಾಪ ಹಾಕುತ್ತಿದ್ದಾರೆ. ಬರುವ ದಿನಗಳಲ್ಲಿ ಈ ಕಾಂಗ್ರೆಸ್ ನಿರ್ನಾಮವಾಗಲಿದೆ. ಜಿಲ್ಲೆಯ ಎಂಟು ವಿಧಾನ ಸಭೆಗಳಲ್ಲಿಯೂ ಬಿಜೆಪಿ ಗೆಲ್ಲಿಸುವ ಗುರಿಯೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ನನ್ನ ಕೈ ಬಲಪಡಿಸಬೇಕೆಂದು ಕೋರಿದರು.
ಪರಾಜಿತ ಅಭ್ಯರ್ಥಿ ಸಂಜೀವ ಐಹೊಳಿ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಜನಬೆಂಬಲ ದೊರೆಯಿತಾದರೂ ಗೆಲುವಿಗೆ ಬೇಕಾದಷ್ಟು ಮತಗಳು ಲಭಿಸಲಿಲ್ಲ. ಈ ಬಾರಿ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿಯ ಅಲೆ ಸೃಷ್ಟಿಯಾಗಿದೆ. ಪ್ರತಿ ಹಳ್ಳಿಗೂ ಭೇಟಿ ನೀಡಿ ಕಾರ್ಯಕರ್ತರ ಮನಗೆಲ್ಲುವ ಪ್ರಯತ್ನ ಮಾಡಿದ್ದು, ಸಂಸದರಾದ ಜಿಗಜಿಣಗಿ ಸಾಹೇಬರ ಮಾರ್ಗದರ್ಶನದಲ್ಲಿ ಈ ಬಾರಿ ಚಡಚಣದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಶತಃ ಸಿದ್ಧ ಎಂದರು.
ಬಿಜೆಪಿ ಮುಖಂಡ ಮಳುಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿ ಅವರು ನೀಡಿರುವ ಕಾಣಿಕೆ ಅವಿಸ್ಮರಣೀಯ. ವಿಮಾನ ನಿಲ್ದಾಣ, ನೀರಾವರಿ, ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆ ನಿಲ್ದಾಣ ಮತ್ತು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಸಂಸದರ ಅಭಿವೃದ್ಧಿಯನ್ನು ಸಾರಿಸಾರಿ ಹೇಳುತ್ತಿವೆ ಎಂದರು. ಮುಖಂಡರಾದ ಭೀಮನಗೌಡ ಬಿರಾದಾರ, ಮಲ್ಲು ದೋತ್ರೆ, ರಾಜುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ ಮತ್ತಿತರರಿದ್ದರು.