ಕಲಬುರಗಿಯಲ್ಲಿ ಗುರುವಾರ ಕರೆದಿದ್ದ ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಸಿಪಿ ಶಾಲು, ಅಪರ ಡಿಸಿ ರಾಯಪ್ಪ ಹುಣಸಗಿ, ಎಸಿ ರಿತಿಕಾ ವರ್ಮಾ ಇದ್ದರು.
- ಅಧಿಕಾರಿಗಳಿಗೆ ಡಿಸಿ ಇಕ್ರಮ್ ಶರೀಫ್ ಸೂಚನೆ
- ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಭೆ
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸೆ.17ರಂದು ನಡೆಯಲಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಸೇರಿ ಸಚಿವ-ಶಾಸಕರು, ಸಂಸದರು ಇತರ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಕ ಉತ್ಸವದ ಪೂರ್ವಭಾವಿ ಸಭೆ ನಡೆಸಿದ ಅವರು, 17ರಂದು ಬೆಳಗ್ಗೆ 8.30ಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಬಳಿಕ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.
16ರಂದು ಸಂಜೆ ನಗರದ ಪ್ರಮುಖ ವೃತ್ತ ಹಾಗೂ ವಿಧಾನಸೌಧ ಸುತ್ತಲಿನ ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡಬೇಕು. ಮುಖ್ಯಮಂತ್ರಿಗಳಿಂದ ಸೌಲಭ್ಯ ವಿತರಿಸಲು ಉದ್ದೇಶಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಿತ ಇಲಾಖೆಗಳು ಮುಂಚಿತವಾಗಿ ಸಲ್ಲಿಸಬೇಕು. ಕೊನೆಯ ಕ್ಷಣದಲ್ಲಿ ಸಲ್ಲಿಸುವ ಪಟ್ಟಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಎಆರ್ ಮೈದಾನದಲ್ಲಿ ವೇದಿಕೆ ಸಿದ್ಧತೆ, ಸೂಕ್ತ ಬಂದೋಬಸ್ತ್, ನಿರಂತರ ವಿದ್ಯುತ್ ಪೂರೈಕೆ ಹಾಗೂ ತುರ್ತು ವೈದ್ಯಕಿಯ ಸೇವೆ ಖಾತರಿಪಡಿಸಬೇಕು. ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯ 15ರ ಸಂಜೆಯೊಳಗೆ ಪೂರ್ಣಗೊಳಿಸಬೇಕು. 17ರಂದು ಬೆಳಗ್ಗೆ 7.30ರೊಳಗೆ ಎಲ್ಲ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ 8ಕ್ಕೆ ಕಡ್ಡಾಯವಾಗಿ ಡಿಎಆರ್ ಮೈದಾನದಲ್ಲಿ ಹಾಜರಿರಬೇಕು. ಮುಖ್ಯಮಂತ್ರಿ ಪ್ರವಾಸ ಹಿನ್ನೆಲೆಯಲ್ಲಿ ಯಾವೊಬ್ಬ ಅಧಿಕಾರಿ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯಬಾರದು. ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಾಕೀತು ಮಾಡಿದರು.
ಕೆಕೆಆರ್ಟಿಸಿ, ಜೆಸ್ಕಾಂ, ಶಿಕ್ಷಣ, ಕೃಷಿ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಂದ ಕಲ್ಯಾಣ ಪಥ ಮತ್ತು ನೈಪುಣ್ಯ ವಿಕಾಸ ಬಿಂಬಿಸುವ ಏಳು ಆಕರ್ಷಕ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ಪ್ರತಿಯೊಂದು ಸ್ತಬ್ಧಚಿತ್ರದ ವಿಷಯ ಮತ್ತು ವಿವರ ಒಳಗೊಂಡ ಒಂದು ಪುಟದ ಟಿಪ್ಪಣಿಯನ್ನು ಮುಂಚಿತವಾಗಿಯೇ ಸಲ್ಲಿಸುವಂತೆ ಸಂಬಂಧಿತರಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಇತರರಿದ್ದರು.
ಎಲ್ಲ ಇಲಾಖೆ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಬಾಕಿ ಇರುವ, ಅದರಲ್ಲೂ ಬಹಳ ದಿನಗಳಿಂದ ವಿಲೇವಾರಿಯಾಗದೆ ಉಳಿದಿರುವ ಪ್ರಕರಣಗಳನ್ನು ನಿಯಮಾನುಸಾರ ತ್ವರಿತ ವಿಲೇವಾರಿ ಮಾಡಬೇಕು. ಮುಖ್ಯಮಂತ್ರಿ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದ್ದಲ್ಲಿ ಸ್ಪಷ್ಟವಾಗಿ ಉತ್ತರಿಸುವಂತೆ ನಿರ್ದೇಶನ ನೀಡಲಾಗಿದೆ.