ಜಮಖಂಡಿ ನಗರದ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಎಂ.ಎನ್. ಮೇಲಿನಮನಿ, ತಾಲೂಕು ವಿಸ್ತರಣಾಧಿಕಾರಿ ಸಂತೋಷ ಬಾಡಗಿ.
- ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಮೇಲಿನಮನಿ ಪರಿಶೀಲನೆ
ಜಮಖಂಡಿ: ನಗರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಗುರುವಾರ ರಾತ್ರಿ ದಿಢೀರ್ ಭೇಟಿ ನೀಡಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಎಂ.ಎನ್. ಮೇಲಿನಮನಿ ಸೌಲಭ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ರಾತ್ರಿ ತಂಗುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ರಾತ್ರಿಪೂರ್ತಿ ಹಾಸ್ಟೆಲ್‌ನಲ್ಲೇ ಉಳಿದುಕೊಂಡ ಮೇಲಿನಮನಿ ಅವರು, ವಿದ್ಯಾರ್ಥಿಗಳಿಗೆ ಉಣಬಡಿಸಲಾಗುವ ಊಟ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳು ಮತ್ತು ವಾರ್ಡನ್‌ಗಳೊಂದಿಗೆ ಸಭೆ ನಡೆಸಿ, ಹಾಸ್ಟೆಲ್‌ನಲ್ಲಿದ್ದ ಸೌಲಭ್ಯಗಳು ಹಾಗೂ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದರು.
ಹಾಸ್ಟೆಲ್ ಸಿಬ್ಬಂದಿ ಹಾಗೂ ವಾರ್ಡನ್‌ಗಳಿಗೆ ಕಠಿಣ ಸೂಚನೆ ನೀಡಿದ ಸಹಾಯಕ ನಿರ್ದೇಶಕರು, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪೌಷ್ಠಿಕ ಹಾಗೂ ಗುಣಮಟ್ಟದ ಆಹಾರವನ್ನೇ ನೀಡಬೇಕು. ಸರ್ಕಾರದ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ತಲುಪುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಂದು ವೇಳೆ ಸೌಲಭ್ಯಗಳಲ್ಲಿ ಯಾವುದೇ ಲೋಪ ಕಂಡುಬಂದರೂ, ಅದಕ್ಕೆ ನೇರವಾಗಿ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿಸಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ವಿವಿಧ ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ವಿಸ್ತರಣಾಧಿಕಾರಿ ಸಂತೋಷ ಬಾಡಗಿ, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.