Work hard to protect water sources.
ಗೌರಿಬಿದನೂರು: ಪೂರ್ವಿಕರು ಬಳುವಳಿಯಾಗಿ ನೀಡಿರುವ ಕೆರೆ, ಕುಂಟೆಯಂತಹ ಸಾಂಪ್ರದಾಯಿಕ ಜಲ ಮೂಲಗಳನ್ನು ಕಾಪಾಡಿ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಲಹೆ ನೀಡಿದರು.
ತಾಲೂಕಿನ ದ್ಯಾವಸಂದ್ರ ಬಳಿ ಚೆಕ್ ಡ್ಯಾಮ್ ನಿಮಾರ್ಣ, ಚಿಕ್ಕಕುರಗೋಡು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಬಯಲು ಸೀಮೆ ಜಿಲ್ಲೆಗಳಾಗಿವೆ. ಯಾವುದೇ ಶಾಶ್ವತ ನದಿ ನಾಲೆಗಳಿಲ್ಲ. ಜನರು ಮೊದಲಿಂದಲೂ ಕೃಷಿಗೆ ಮಳೆಯನ್ನೇ ಅವಲಂಬಿಸಿದ್ದಾರೆ. ಇದನ್ನು ಮನಗಂಡು ಪೂರ್ವಿಕರು ಅಂದಿನ ಕಾಲದಲ್ಲೇ ಕೆರೆ, ಕುಂಟೆಗಳ ನಿಮಾರ್ಣಕ್ಕೆ ಒತ್ತು ನೀಡಿದ್ದಾರೆ.
ರಾಜ್ಯದಲ್ಲೇ ಅಧಿಕ ಕೆರೆ ಕುಂಟೆಗಳು ಎರಡು ಜಿಲ್ಲೆಗಳಲ್ಲಿವೆ. ಅವುಗಳನ್ನು ರಕ್ಷಿಸಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಜಲ ಮೂಲಗಳು ಬತ್ತಿ ಜಲ ಕ್ಷಾಮ ಎದುರಿಸಬೇಕಾಗುತ್ತದೆ. ಗೂಳೆ ಹೋಗಬೇಕಾದ ಪರಿಸ್ಥಿತಿ ನಿಮಾರ್ಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲ ಕೆರೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ವಿವಿಧ ಮೂಲಗಳಿಂದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.
ಮುಖಂಡ ನಾಗೇಂದ್ರ ಮಾತನಾಡಿ, ಶಾಸಕರು ಕೃಷಿ ಕ್ಷೇತ್ರದ ಪ್ರಗತಿಗೆ ಒತ್ತು ನೀಡುತ್ತಿದ್ದಾರೆ. ರೈತರಿಗೆ ಕೃಷಿ ಇಲಾಖೆ ಸೌಲಭ್ಯಗಳ ಜತೆಗೆ ವೈಯಕ್ತಿಕ ನೆರವು ಒದಗಿಸುತ್ತಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಚೆಕ್ ಡ್ಯಾಮ್ ನಿರ್ಮಿಸುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ಕೆ.ವಿಜಯ ರಾಘವ, ಮುಖಂಡರಾದ ಆರ್.ಆರ್.ರೆಡ್ಡಿ, ಅಶೋಕ್, ವಿಜಯ್ ಕುಮಾರ್, ಮಂಜುನಾಥ್, ಲೆಂಕಪ್ಪ, ಶ್ರೀನಿವಾಸ್ ಗೌಡ ಇದ್ದರು.