ಬಿಎಂಟಿಸಿ ಬಸ್​ನಲ್ಲಿ ಮಹಿಳೆಯಿಂದ ರಂಪಾಟ 
ರಾಜ್ಯ

ಯಾರೇ ಬರಲಿ ನಾನು ಮಾತಾಡ್ತೀನಿ! ಟಿಕೆಟ್​ ಹರಿದು ಬಿಸಾಡಿದ ಮಹಿಳೆಯ ರಂಪಾಟಕ್ಕೆ ಕಂಡಕ್ಟರ್ ಸುಸ್ತೋ ಸುಸ್ತು

ಪ್ರಮುಖ ಮುಖ್ಯಾಂಶಗಳು

  • ಬಿಎಂಟಿಸಿ ಬಸ್​ ಪ್ರಯಾಣದಲ್ಲಿ ಟಿಕೆಟ್​ ಹರಿದು ಬಿಸಾಡಿದ ಮಹಿಳೆ
  • ಹಣ ಕೊಟ್ಟು ಇನ್ನೊಂದು ಟಿಕೆಟ್​ ತಗೋಬೇಕು ಎಂದು ಕಂಡಕ್ಟರ್​ ಪಟ್ಟು
  • ಇದ್ಯಾವುದಕ್ಕೂ ಬಗ್ಗದ ಮಹಿಳೆಯಿಂದ ಉದ್ಧಟತನ
ಬೆಂಗಳೂರು: ನಗರದ ಬಿಎಂಟಿಸಿ ಬಸ್​ ಹತ್ತಿದ ಮಹಿಳೆಯೊಬ್ಬಳು, ಶಕ್ತಿ ಯೋಜನೆಯ ಉಚಿತ ಟಿಕೆಟ್​ ಪಡೆದಿದ್ದೇ ಆದರೂ ಚೀಟಿಯನ್ನು ಹರಿದು ಬಿಸಾಡಿದ ಘಟನೆ ಮೆಜೆಸ್ಟಿಕ್‌ನಿಂದ ದಾಬಾಸ್‌ಪೇಟೆ ಮಾರ್ಗದಲ್ಲಿ ಸಾಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ.
ಸೀಟಿನಲ್ಲಿ ಕುಳಿತ ಮಹಿಳೆಗೆ ಟಿಕೆಟ್​ ಕೊಟ್ಟು ಕಂಡಕ್ಟರ್ ಮುಂದೆ ಹೋಗಿದ್ದಾರೆ. ತಕ್ಷಣವೇ ಟಿಕೆಟ್​ ಹರಿದು ಬಿಸಾಡಿದ ಮಹಿಳೆಯನ್ನು ನಿರ್ವಾಹಕಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನಬಂದಂತೆ ಮಾತನಾಡಿದ ಮಹಿಳೆ, ನಾನು ಇನ್ನೊಂದು ಟಿಕೆಟ್​ ಪಡೆಯೋದಿಲ್ಲ. ಯಾರೇ ಬರಲಿ ಮಾತಾಡ್ತೀನಿ. ಚೆಕಿಂಗ್​ನವರು ಬಂದರೆ ಅವರಿಗೆ ನಾನೇ ಉತ್ತರಿಸುತ್ತೇನೆ. ಯಾವುದೇ ಕಾರಣಕ್ಕೂ ಇನ್ನೊಂದು ಟಿಕೆಟ್​ ಬೇಡ ಎಂದು ಉದ್ದಟತನ ತೋರಿದ್ದಾಳೆ.
ಮಹಿಳೆಯ ಹಠಕ್ಕೆ ಕಂಡಕ್ಟರ್ ಮತ್ತು ಬಸ್​ನಲ್ಲಿದ್ದ ಸಹ ಪ್ರಯಾಣಿಕರು ಬೇಸತ್ತಿದ್ದಾರೆ. ಟಿಕೆಟ್​ ಪಡೆದು, ಪ್ರಯಾಣಿಸುವಂತೆ ಹೇಳಿದರೆ, ಪಡೆಯೋದಿಲ್ಲ ಎಂದು ಹಠಕ್ಕೆ ಬಿದ್ದು ಬಸ್​ನಿಂದ ಕೆಳಗಿಳಿಯಲು ನಿರಾಕರಿಸಿದ್ದಾಳೆ. ಮಹಿಳೆಯ ದುರ್ವತನೆಗೆ ಸಹ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಬಸ್​ನಿಂದ ಕೆಳಗಿಳಿಯುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಕಡೆಗೆ ಮಹಿಳೆಯ ಬದಲಿಗೆ ಸಹ ಪ್ರಯಾಣಿಕರೊಬ್ಬರು ಟಿಕೆಟ್​ ಪಡೆದು ಜಟಾಪಟಿಗೆ ತೆರೆ ಎಳೆದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.