ವ್ಯಕ್ತಿಗೆ ಥಳಿಸಿದ ಮಹಿಳೆ  
ರಾಜ್ಯ

ಕಣ್ಣಿಗೆ ಖಾರದ ಪುಡಿ ಎರಚಿ ಥಳಿತ! ನೋಡಿ ನೋಡಿ ಸಾಕಾಗಿ ಬಸ್​ ನಿಲ್ದಾಣದಲ್ಲೇ ವ್ಯಕ್ತಿಗೆ ಬುದ್ಧಿ ಕಲಿಸಿದ ಮಹಿಳೆ

ರಾಯಚೂರು: ಬಸ್​ಗಾಗಿ ಕಾಯುತ್ತಿದ್ದ ವೇಳೆ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿದ ಮಹಿಳೆಯೊಬ್ಬರು, ಆತನಿಗೆ ಎಲ್ಲರೆದುರು ಮನಸೋ ಇಚ್ಚೆ ಥಳಿಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜು ಎನ್ನುವ ವ್ಯಕ್ತಿ ಸಹ ಪ್ರಯಾಣಿಕನಂತೆ ನಿಂತಿದ್ದ. ಈ ವೇಳೆ ಮಹಿಳೆಗೆ ಪದೇ ಪದೇ ಚುಡಾಯಿಸಿದ್ದಾನೆ. ವ್ಯಕ್ತಿಯ ವರ್ತನೆ ಸಹಿಸಲಾಗದೆ ಬಸ್ ನಿಲ್ದಾಣದ ಹೋಟೆಲ್​ನಲ್ಲಿ ಖಾರದ ಪುಡಿ ಕೇಳಿದ ಮಹಿಳೆ, ಅದನ್ನು ತಂದು ವ್ಯಕ್ತಿಯ ಕಣ್ಣಿಗೆ ಎರಚಿ ಮನಬಂದಂತೆ ಥಳಿಸಿದ್ದಾರೆ.
ನನ್ನ ಮೇಲೆ ಕೇಸ್ ಹಾಕಿದರೂ ಪರವಾಗಿಲ್ಲ, ಜೈಲಿಗೆ ಹೋದರೂ ಚಿಂತೆಯಿಲ್ಲ. ಆದರೆ, ಇವನನ್ನು ಮಾತ್ರ ಬಿಡೋದಿಲ್ಲ ಎಂದು ಕೂಗಾಡಿ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಬೆನ್ನಲ್ಲೇ ಬಸ್​ ನಿಲ್ದಾಣದಲ್ಲಿ ಜನ ಸೇರಿದ್ದು, ಮಹಿಳೆಯಿಂದ ಗೂಸಾ ತಿಂದ ವ್ಯಕ್ತಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಸದರಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.