ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿಯಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟವನ್ನು ಪ್ರತಿಭಾಶರತ್​ ಬಚ್ಚೇಗೌಡ ಉದ್ಘಾಟಿಸಿದರು. ಟಿಎಪಿಸಿಎಂಎಸ್​ ನಿರ್ದೇಶಕಿ ಬೇಗೂರು ಪಾರ್ವತಮ್ಮ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಮಾಜಿ ಅಧ್ಯಕ್ಷೆ ಭಾರತಿದೇವರಾಜ್​ ಇತರರು ಇದ್ದರು. 
ರಾಜ್ಯ

ಮಹಿಳೆಯರು ಆರ್ಥಿಕವಾಗಿ ಸಬಲರಾಗಿ / SULIBELE

ಸೂಲಿಬೆಲೆ : ಮಹಿಳೆಯರು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಸಬಲರಾಗಬೇಕು. ಪ್ರತಿ ಹೆಣ್ಣು ಶಿಕ್ಷಣ ಕಲಿತು ಸಮಾಜಕ್ಕೆ ದಾರಿದೀಪವಾಗಬೇಕು. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು ಎಂಬಂತೆ ಮಾದರಿಯಾಗಬೇಕು ಎಂದು ಹೊಸಕೋಟೆ ಎಸ್​ಬಿಜಿ ಟೀಮ್​ ಸಂಸ್ಥಾಪಕಿ ಪ್ರತಿಭಾ ಶರತ್​ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಲಿಂಗತಾರತಮ್ಯ ಹೋಗಲಾಡಿಸಬೇಕು. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಭಾವನಾತ್ಮಕ ಭಾಂದವ್ಯ ಹೊಂದಿದ್ದು, ವಿಶ್ರಾಂತಿ ಪಡೆಯದೇ ಕ್ಷೇತ್ರದಲ್ಲಿ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಿವಮ್ಮ ಮಾತನಾಡಿ, ಶಾಸಕರ ಮಾರ್ಗದರ್ಶನದಂತೆ ಗ್ರಾಪಂ ಮತ್ತು ಇಲಾಖೆ ಸಹಯೋಗದಲ್ಲಿ ಮಹಿಳೆಯ ಸಬಲೀಕರಣದ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಿ ಅವರಿಗೆ ವೇದಿಕೆ ಕಲ್ಪಿಸುತ್ತಿದ್ದೇವೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯ ಮಹಿಳೆಯರು ಕ್ರೀಡಾಕೂಟದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ರಂಗೋಲೆ ಸ್ಪರ್ಧೆ, ಹಗ್ಗಜಗ್ಗಾಟ, ಲೆಮನ್​ ಆ್ಯಂಡ್​ ಸ್ಪೂನ್​, ಮ್ಯೂಜಿಕಲ್​ ಚೇರ್​, ಬಕೆಟ್​ ಬಾಲ್​, 100 ಮೀಟರ್​ ಓಟ ನಡೆಯಿತು. ಪ್ರಥಮ 5 ಸಾವಿರ, ದ್ವೀತಿಯ 3 ಸಾವಿರ, ತೃತೀಯ 2 ಸಾವಿರ ಹಾಗೂ ಭಾಗವಹಿಸಿದ್ದವರಿಗೆ ಸಮಾಧಾನಕರ ಬಹುಮಾನವನ್ನು ಪ್ರತಿಭಾ ಶರತ್​ ಬಚ್ಚೇಗೌಡ ವಿತರಣೆ ಮಾಡಿದರು.
ಉಪಾಧ್ಯಕ್ಷೆ ಮುನಿಯಮ್ಮ, ಗೀತಾ, ಪದ್ಮಾವತಿ, ಗ್ರಾಪಂ ಸದಸ್ಯೆ ಮಂಜುಳಾ, ಅಶ್ವಿನಿಸುರೇಶ್​, ಮಾಜಿ ಅಧ್ಯಕ್ಷ ರಾಧಾಕೃಷ್ಣ, ಬೈರೇಗೌಡ, ಆನಂದ್​, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಹೇಮಣ್ಣ, ಸಹಕಾರ ಬ್ಯಾಂಕ್​ ನಿರ್ದೇಶಕ ವಿನಯ್​, ಮುಖಂಡ ಮಂಜುನಾಥ್​, ಕಮ್ಮಸಂದ್ರ ವಸಂತಕುಮಾರ್​, ದೇವರಾಜ್​, ಅಂಬರೀಷ್​ ಇತರರು ಇದ್ದರು.