ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವುದರ ಜತೆಗೆ ಸಂಕಷ್ಟದಲ್ಲಿ ನೆರವು ನೀಡುವ ಉದ್ದೇಶಿತ ಯೋಜನೆ ಅಕ್ಕ ಪಡೆಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಿ ಸರ್ಕಾರ ಆದೇಶಿಸಿದೆ.
2025-26ನೇ ಸಾಲಿನ ಬಜೆಟ್ ಅನ್ವಯ 30 ಜಿಲ್ಲೆಗಳಲ್ಲಿ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದೆ. ಜಿಲ್ಲೆಯಲ್ಲಿ ಅಕ್ಕ ಪಡೆಯ ಯೋಜನೆ ಅನುಷ್ಠಾನ ಕುರಿತಂತೆ ಉಪ ನಿರ್ದೇಶಕರ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಂತೆ ಇರಲಿದೆ.
ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜನೆಯೊಂದಿಗೆ ಅಕ್ಕಪಡೆ ತಂಡದ ಜಾಗೃತಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಕಾರ್ಯಪ್ರವೃತ್ತಿಗೊಳಿಸುವುದು ಹಾಗೂ ಅಕ್ಕಪಡೆ ತಂಡಗಳು ಗಸ್ತು ಸಂಚರಿಸಬೇಕಾದ ಸ್ಥಳಗಳ ಬಗ್ಗೆ ಪೊಲೀಸ್ ಠಾಣೆಗಳೊಂದಿಗೆ ಸಮಾಲೋಚಿಸಬೇಕು.
ಅಕ್ಕಪಡೆಗೆ ನಿಯೋಜನೆ ಆಗಿರುವ ಗೃಹರಕ್ಷಕರ ಕರ್ತವ್ಯ ನಿರ್ವಹಣೆ ಬಗ್ಗೆ ಆಯಾ ತಿಂಗಳ ಹಾಜರಾತಿ ಪುಸ್ತಕ/ದಾಖಲೆಗಳನ್ನು ನಿರ್ವಹಿಸುತ್ತಿರುವ ಬಗ್ಗೆ ತಿಂಗಳ ಅಂತ್ಯದಲ್ಲಿ ದೃಢೀಕೃತ ಹಾಜರಾತಿ ಪ್ರಮಾಣಪತ್ರವನ್ನು ಜಿಲ್ಲಾ ಗೃಹರಕ್ಷಕರ ಕಚೇರಿಗೆ ನೀಡುವಂತೆ ಷರತ್ತು ವಿಧಿಸಲಾಗಿದೆ.
ಅಕ್ಕ ಪಡೆಯವರಿಗೆ ಸಂಬಂಧಪಟ್ಟ ಇಲಾಖೆಯಿಂದ ತರಬೇತಿ ನೀಡಬೇಕು. ಪ್ರತಿದಿನ ಕಾರ್ಯ ನಿರ್ವಹಿಸಿರುವ ಸ್ಥಳಗಳ ಜಿಪಿಎಸ್ ವಿವರವನ್ನು ಸಲ್ಲಿಸಬೇಕು. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನು ರಕ್ಷಿಸಿ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಸಿ ಸದಸ್ಯ ಕಾರ್ಯದರ್ಶಿ ಆಗಿರುವ ಉಪ ನಿರ್ದೇಶಕರಿಗೆ ಮಾಹಿತಿ ನೀಡಬೇಕೆಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.