Woman stages sit-in in front of cheating husband's house 
ರಾಜ್ಯ

ವಂಚಿಸಿದ ಪತಿಯ ಮನೆ ಎದುರು ಮಹಿಳೆ ಧರಣಿ

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿ ವಂಚಿಸಿದ ಪತಿಯ ಮನೆ ಎದುರು ಅಂಬೇಡ್ಕರ್​ ಭಾವಚಿತ್ರ ಹಿಡಿದುಕೊಂಡು ಮಹಿಳೆ ಧರಣಿ ಕುಳಿತು, ನ್ಯಾಯಕ್ಕಾಗಿ ಒತ್ತಾಯಿಸಿದ್ದು, ಆಕೆಯ ಮೇಲೆ ಪತಿ, ಅತ್ತೆ, ಮಾವ ಹಲ್ಲೆ ನಡೆಸಿದ್ದಾರೆ.
ಪ್ರೀತಿಸಿ ಮದುವೆಯಾದ ಬಳಿಕ ಗುಡಿಬಂಡೆ ತಾಲೂಕು ಬತ್ತಹಳ್ಳಿಯ ಟಿಪ್ಪರ್​ ಚಾಲಕ, ಪತಿ ಮುನಿರಾಜು (36) ಚಿನ್ನಾಭರಣ, ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿದ್ದಾನೆ ಎಂದು ಸಂತ್ರಸ್ತೆ ಹಾಸನ ಮೂಲದ ಚೇತನಾ (29) ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನಾಗೆ ಟಿಪ್ಪರ್​ ಚಾಲಕ ಮುನಿರಾಜು ಪರಿಚಯವಾಗಿದ್ದಾನೆ. 10 ರೂ. ನೋಟಿನಲ್ಲಿ ಪ್ರೇಮ ಸಂದೇಶ ಕಳುಹಿಸಿದ್ದು, ಕೊನೆಗೆ ಇಬ್ಬರು ಮದುವೆಯಾಗಿ 3 ತಿಂಗಳು ಬಾಡಿಗೆ ಮನೆಯಲ್ಲಿದ್ದರು. ಇದೇ ವೇಳೆ ಕುಟುಂಬದ ನಿರ್ವಹಣೆ ಹೆಸರಿನಲ್ಲಿ ಹೆಂಡತಿಯ ಬಳಿ ಇದ್ದ ಚಿನ್ನಾಭರಣ, 3 ಲಕ್ಷ ರೂ. ಪಡೆದುಕೊಂಡ ಬಳಿಕ ಮುನಿರಾಜು ಕೈ ಕೊಟ್ಟಿದ್ದಾನೆ.
ಈ ನಡುವೆ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ಆರೋಪಿಯ ಪಾಲಕರು ಗಲಾಟೆ ಮಾಡಿದಾಗ ಹಿರಿಯರು ಸಂಧಾನ ನಡೆಸಿದ್ದರು. ಆದರೆ, ಮತ್ತೆ ಕೆಲ ದಿನಗಳ ಬಳಿಕ ಕ್ಯಾತೆ ತೆಗೆದು ಮನೆಯಿಂದ ಹೊರ ಹಾಕಲಾಗಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದು, ಪೆರೇಸಂದ್ರ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಸ್ಪಂದನೆ ಸಿಗದ ಬತ್ತಹಳ್ಳಿಯಲ್ಲಿ ಮುನಿರಾಜು ಮನೆ ಮುಂಭಾಗ ಧರಣಿ ಕುಳಿತಿದ್ದಾರೆ, ಆಗ ಚೇತನಾಳ ಮೇಲೆ ಪತಿ, ಅತ್ತೆ, ಮಾವ ಹಲ್ಲೆ ನಡೆಸಿದ್ದಾರೆ. ಇದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದು, ಪ್ರಕರಣದ ವಿಚಾರಣೆ ಕೈಗೊಂಡಿದ್ದಾರೆ.