ಸಾಂದರ್ಭಿಕ ಚಿತ್ರ 
ರಾಜ್ಯ

ರಾಜಸ್ಥಾನ್ ಗ್ಯಾಂಗ್‌ನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • ಅಪಹರಣಕ್ಕೆ ಸೋದರತ್ತೆ ಸುಪಾರಿ ಆರೋಪ
  • ಚಾಲಕನ ಪತ್ತೆಗೆ ಮುಂದುವರೆದ ಶೋಧ
ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ರಾಜಸ್ಥಾನ ಮೂಲದ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಆಕೆಗೆ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾರೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಮಹಿಳೆ ಪೂಜಾ ಮತ್ತು ಆಕೆಯ ಪತಿ ಓಂ ಪ್ರಕಾಶ್ ಒಂದೇ ಗ್ರಾಮದವರಾಗಿದ್ದಾರೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಫೆಬ್ರವರಿಯಲ್ಲಿ ಪಾಲಿ ಜಿಲ್ಲೆಯ ಕೋರ್ಟ್‌ನಲ್ಲಿ ಇಬ್ಬರು ಮದುವೆಯಾಗಿದ್ದರು. ನಂತರ ಪೋಷಕರ ಪ್ರಾಣ ಭಯದಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಓಂಪ್ರಕಾಶ್ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ನಂತರ ದಂಪತಿ 10 ದಿನಗಳ ಹಿಂದಷ್ಟೇ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಕಿಡ್ನಾಪ್‌ಗೆ ಸುಪಾರಿ:

ಪೂಜಾಳ ಸೋದರ ಅತ್ತೆ ಪಾಣಿದೇವಿ ನಾಲ್ಕೈದು ಮಂದಿ ಯುವಕರನ್ನು ಕಳುಹಿಸಿ ಪೂಜಾಳನ್ನು ಕರೆತರಲು ಸುಪಾರಿ ನೀಡಿದ್ದರು. ಅದರಂತೆ ಆರೋಪಿಗಳು ಸೆ.16ರಂದು ಸಂಜೆ ಪೂಜಾಳ ಮನೆಗೆ ಬಂದು ಒಬ್ಬಳೆ ಇದ್ದ ಪೂಜಾಳ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ. ನಂತರ ಕಾರಿನಲ್ಲಿ ಕರೆದೊಯ್ಯುವಾಗ ಆರೋಪಿಗಳ ಪೈಕಿ ಒಬ್ಬಾತ ಪೂಜಾಳ ಕೈಗೆ ಮುತ್ತುಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಸೋದರ ಅತ್ತೆ ಪಾಣಿದೇವಿಗೆ ವಿಡಿಯೋ ಕರೆ ಮಾಡಿ, ಕರೆತರುವುದಾಗಿ ಮಾಹಿತಿ ನೀಡಿದ್ದಾನೆ. ಈ ವೇಳೆ ಪಾಣಿದೇವಿ ನಮ್ಮ ಹುಡುಗರ ಜತೆ ಮನೆಗೆ ಬರಬೇಕು. ಇಲ್ಲವಾದರೆ ನಿನ್ನ ಪತಿಯನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕಾರು ಚಾಲಕ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಪೂಜಾಳನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಆರೋಪಿಯೊಬ್ಬ ಯಾರೇ ಬಂದರೂ ಕಾರನ್ನು ನಿಲ್ಲಿಸಬೇಡ. ಅಡ್ಡ ಬಂದರೆ ಗುದ್ದಿಕೊಂಡು ಹೋಗುವಂತೆ ಸೂಚಿಸಿದ್ದ. ಹೀಗಾಗಿ ಕಾರು ಚಾಲಕ ಸದ್ದಾಂ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಪಹರಣಕಾರರು, ನ್ಯಾಯಾಧೀಶರ ವಾಹನ, ಬೈಕ್ ಸೇರಿ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ.
ಹೊಸಹಳ್ಳಿ ಬಳಿ ಕಾರು ಅಡ್ಡಗಟ್ಟಿ ನಿಲ್ಲಿಸಿದ ಸ್ಥಳೀಯರು ಕಾರಿನ ಮೇಲೆ ಕಲ್ಲುಗಳ ಎತ್ತಿ ಹಾಕಿ, ದುಷ್ಕರ್ಮಿಗಳನ್ನು ಹಿಡಿದು ಹಿಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಆರೋಪಿಗಳು ತೀವ್ರ ಅಸ್ವಸ್ಥರಾಗಿದ್ದಾರೆ. ಅವರಿಗೂ ಚಿಕಿತ್ಸೆ ಕೊಡಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.