Woman Found Dead in chikkaballapura 
ರಾಜ್ಯ

ನಂದಿ ಬೆಟ್ಟದ ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು; ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಿಯಕರ ಪತ್ತೆ..Chikkaballapur

ಪ್ರಮುಖ ಮುಖ್ಯಾಂಶಗಳು

  • ನಂದಿ ಬೆಟ್ಟದ ಬಳಿಯ ಹೋಂ ಸ್ಟೇವೊಂದರಲ್ಲಿ ಯುವತಿ ಮೃತದೇಹ ಪತ್ತೆ
  • ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸುರಭಿ ಪ್ರಿಯಕರ ಕೇರಳದ ಕೋಝಿಕ್ಕೋಡ್ ನಿವಾಸಿ ಸಂಜಿತ್​​​ ಅಲಿ
  • ಲವ್​ ಜಿಹಾದ್​ ಕೊಲೆ ಆರೋಪ ಹೊರಿಸಿದ ಸುರಭಿ ತಾಯಿ ಗೀತಾ
ಚಿಕ್ಕಬಳ್ಳಾಪುರ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದ ಬಳಿಯ ಹೋಂ ಸ್ಟೇವೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಸುರಭಿ ಎಂದು ಆಕೆಯನ್ನು ಗುರುತಿಸಲಾಗಿದ್ದು, ಆಕೆಯ ಪ್ರೇಮಿ ಸಂಜಿತ್​​​ ಅಲಿಯಿಂದ ಕೊಲೆಯಾಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ. ಸದ್ಯ ಶಂಕಿತ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.  
ಸಾಯಿ ಸುರಭಿ ಬೆಂಗಳೂರಿನಾಕೆ. ಕೇರಳದ ಕೋಝಿಕ್ಕೋಡ್ ನಿವಾಸಿ ಸಂಜಿತ್​​​ ಅಲಿ ಕ್ಯಾಬ್​​​ ಡ್ರೈವರ್​ ಆಗಿ ಜೀವನ ಕಟ್ಟಿಕೊಂಡಿದ್ದ. ಇಬ್ಬರು ಶನಿವಾರ ಹೋಂ ಸ್ಟೇನಲ್ಲಿ ತಂಗಿದ್ದರು. ಸೋಮವಾರ ಚೆಕ್​ಔಟ್​ ಆಗಬೇಕಿತ್ತು. ಎಷ್ಟೇ ಸಮಯ ಕಳೆದರೂ ಹೊರಬರದ ಕಾರಣ  ಸಿಬ್ಬಂದಿ ಒಳಗೆ ನುಸುಳಿದಾಗ  ಪ್ರಕರಣ ಬೆಳಕಿಗೆ ಬಂದಿದೆ. 

ಲವ್​ ಜಿಹಾದ್​ ಆರೋಪ

ಸಾಯಿ ಸುರಭಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು.  ರೂಂನಲ್ಲಿ ಮಾತ್ರೆಗಳು ಪತ್ತೆಯಾಗಿದ್ದ ಕಾರಣ, ಇಬ್ಬರು ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಪರ್ಸನಲ್​ ಡೈರಿ ಸಿಕ್ಕಿದ್ದು, ಅದರಲ್ಲಿರುವ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಹೊತ್ತಿನಲ್ಲಿ ಮೃತ ಯುವತಿಯ ತಾಯಿ ಗೀತಾ ಮಾಧ್ಯಮಗಳ ಮುಂದೆ ಮಾತನಾಡಿದ್ದು, ಇದೊಂದು  ಲವ್​ ಜಿಹಾದ್​ ಕೊಲೆ, ಮಗಳನ್ನು ಡ್ರಗ್​ ಅಡಿಕ್ಟ್​ ಮಾಡಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.

ಯುವತಿ ತಾಯಿ ಹೇಳಿದ್ದಿಷ್ಟು

ನನ್ನ ಮಗಳು ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದಳು. ಆಗ ಆಕೆಗೆ ಆತ ಸ್ನೇಹಿತರ ಮುಖೇನ ಪರಿಚಯವಾಗಿದ್ದ. ಪ್ರೀತಿಸು ಎಂದು ಪೀಡಿಸುತ್ತಿದ್ದ ಈ ಬಗ್ಗೆ ನಾನು ಬನಶಂಕರಿ ಹಾಗೂ ಕುಮಾರಸ್ವಾಮಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದೆ.   ಆಕೆ ಡ್ರಗ್​ ಅಡಿಕ್ಟ್​ ಆಗುವಂತೆ ಮಾಡಿದ್ದ ಒಮ್ಮೆ ನಾನು ಚಿಕಿತ್ಸೆ ಕೊಡಿಸಿದ್ದೆ ಸರಿಯಾಗಿದ್ದಳು. ಮುದ್ದೇನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ಸತ್ಸಂಗ ಇದೆ ಎಂದಿದ್ದಳು. ಆತ ನನ್ನ ಮಗಳನ್ನು ಪದೇ ಪದೆ ಹುಡುಕಿ ಬರುತ್ತಿದ್ದ ಎಂದು ಸುರಭಿ ತಾಯಿ ಟಿ.ಆರ್.ಗೀತಾ ದೂರಿದ್ದಾರೆ

ಪೊಲೀಸರು ಹೇಳಿದ್ದೇನು?

ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ  ಮಾತನಾಡಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಿದ್ದೇವೆ, ಸಂಜಿತ್​  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಸಂಪೂರ್ಣ ಚೇತರಿಸಿಕೊಂಡ ನಂತರ  ಘಟನೆ ನಡೆದ ದಿನ ಏನಾಗಿತ್ತು ಎನ್ನುವುದು ಬೆಳಕಿಗೆ ಬರಲಿದೆ. ಮರಣೋತ್ತರ ಪರೀಕ್ಷೆಗಾಗಿ ಯುವತಿ ಮೃತದೇಹವನ್ನು ರವಾನಿಸಲಾಗಿದೆ. ವರದಿ ಬಂದ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).