Woman eats rat poison on bus
ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ನಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಚಾಲಕ ಹಾಗೂ ನಿರ್ವಾಹಕ ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯ ನಿರ್ಮಲಾ(28) ಅಸ್ವಸ್ಥಗೊಂಡವರು. ಬಾಗೇಪಲ್ಲಿ ಡಿಪೋ ಚಾಲಕ ನಾರಾಯಣಸ್ವಾಮಿ ಹಾಗೂ ನಿರ್ವಾಹಕ ಸುಧಾಕರ್ ಸಮಯ ಪ್ರಜ್ಞೆಯಿಂದ ಆಕೆಯ ಜೀವ ಉಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ಹಾಗೂ ಬಾಗೇಪಲ್ಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಅನ್ನು ದೇವನಹಳ್ಳಿಯಲ್ಲಿ ನಿರ್ಮಲಾ ಹತ್ತಿದ್ದಾರೆ. 10 ಕಿ.ಮೀ. ಸಾಗಿ ಬರುತ್ತಿದ್ದಂತೆ ಅಸ್ವಸ್ಥರಾಗಿ ಸೀಟಿನಲ್ಲಿ ಬಿದ್ದಿದ್ದಾರೆ. ಕೈಯಲ್ಲಿ ಇಲಿ ಪಾಷಣ ಇತ್ತು. ಇದರ ಬಗ್ಗೆ ಸಹ ಪ್ರಯಾಣಿಕರು ನಿರ್ವಾಹಕ ಸುಧಾಕರ್ ಗಮನ ಸೆಳೆದಿದ್ದು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಾಲಕ ನಾರಾಯಣಸ್ವಾಮಿ ಮಾರ್ಗ ಮಧ್ಯೆ ಇರುವ ಜೈನ್ ಆಸ್ಪತ್ರೆಗೆ ಬಸ್ ಸಮೇತ ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೌಟುಂಬಿಕ ಕಲಹ?: ಎರಡು ವರ್ಷಗಳ ಹಿಂದೆ ರಾಯಚೂರಿನ ಗಾರೆಕೆಲಸಗಾರ ರಮೇಶ್ನನ್ನು ನಿರ್ಮಲಾ ವಿವಾಹವಾಗಿದ್ದರು. ಇತ್ತೀಚೆಗೆ ತಾಯಿ ಮನೆಗೆ ಬಂದಿದ್ದರು. ಕೆಲಸದ ನಿಮಿತ್ತ ಯಲಹಂಕದಿಂದ ಚಿಕ್ಕಬಳ್ಳಾಪುರಕ್ಕೆ ಸೋಮವಾರ ಮಧ್ಯಾಹ್ನ ಆಗಮಿಸುತ್ತಿದ್ದು, ಇದೇ ವೇಳೆ ಇಲಿ ಪಾಷಣ ಸೇವಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.