- ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು
- ನಕರಾತ್ಮಕ ಶಕ್ತಿ ನಿವಾರಣೆಗೆ ನೆಪದಲ್ಲಿ ವಂಚನೆ
ಮನೆಯಲ್ಲಿನ ನಕರಾತ್ಮಕ ಶಕ್ತಿಗಳ ಪ್ರಭಾವ ನಿವಾರಿಸಲು ವಿಶೇಷ ಪೂಜೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ನಕಲಿ ಬಾಬು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜಪೇಟೆ ನಿವಾಸಿ ಕುಮುದಾ ಎಂಬುವರು ನೀಡಿದ ದೂರಿನ ಮೇರೆಗೆ ನಕಲಿ ಬಾಬಾ ಅಪ್ಸರ್ ಪಾಷಾ, ಮಧ್ಯವರ್ತಿಗಳಾದ ಶಂಕರ್ ಹಾಗೂ ಭರತ್ ಎಂಬುವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶ ಮೂಲದ ಕುಮುದಾ, ಹಲವು ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಕುಮುದಾ ತಮ್ಮ ಮನೆ ಮೇಲೆ ಸಾಲ ಪಡೆಯಲು ಬ್ಯಾಂಕ್‌ವೊಂದಕ್ಕೆ ಹೋಗಿದ್ದರು. ಆಗ ಆರೋಪಿಗಳಾದ ಶಂಕರ್ ಮತ್ತು ಭರತ್ ಪರಿಚಯವಾಗಿತ್ತು. ತಾವು ಸಾಲ ಕೊಡಿಸುವುದಾಗಿ ನಂಬಿಸಿದ್ದರು.
ಇದೇ ವೇಳೆ ಕುಮುದಾ ಅವರ ಪುತ್ರನಿಗೆ ರಸ್ತೆ ಅಪಘಾತವಾಗಿ ಗಾಯಗೊಂಡಿದ್ದ ವಿಚಾರ ತಿಳಿದ ಆರೋಪಿಗಳು, ಮನೆಯಲ್ಲಿ ಯಾವುದೋ ನಕರಾತ್ಮಕ ಶಕ್ತಿ ಇರಬಹುದು. ಅದಕ್ಕೆ ವಿಶೇಷ ಪೂಜೆ ಮಾಡಿಸಿ, ತಮಗೆ ಪರಿಚಯವಿರುವ ಗುರೂಜಿಯೊಬ್ಬರು ಈ ಕುರಿತು ಪೂಜೆ ಮಾಡುತ್ತಾರೆ ಎಂದು ನಂಬಿಸಿ, ಅಪ್ಸರ್ ಪಾಷಾನನ್ನು ಪರಿಚಯಿಸಿದ್ದರು.
ನಂತರ ಒಮ್ಮೆ ಮನೆಗೆ ಬಂದ ಅಪ್ಸರ್ ಪಾಷಾ, ವಿಶೇಷ ಪೂಜೆಗೆ 8 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ಅದರಂತೆ ಲಕ್ಷಾಂತರ ರೂ. ಕೊಟ್ಟು ಪೂಜೆಯನ್ನು ಕುಮುದಾ ಮಾಡಿಸಿದ್ದಾನೆ. ಕೆಲ ದಿನಗಳ ಬಳಿಕ ಆರೋಪಿಗಳು, ರಿಸರ್ವ್ ಬ್ಯಾಂಕ್‌ನಿಂದ ನಮಗೆ 500 ಕೋಟಿ ರೂ. ಬರಬೇಕಿದೆ. ಸದ್ಯಕ್ಕೆ 2.5 ಕೋಟಿ ರೂ. ಸಾಲವಾಗಿ ಕೊಟ್ಟರೆ, ಬ್ಯಾಂಕ್‌ನಿಂದ ಹಣ ಬಿಡುಗಡೆಯಾದ ತಕ್ಷಣ 10 ಕೋಟಿ ರೂ. ವಾಪಸ್ ಕೊಡುತ್ತೇವೆಂದು ನಂಬಿಸಿದ್ದಾರೆ. ನಕಲಿ ಬಾಬಾ ಹಾಗೂ ಮಧ್ಯವರ್ತಿಗಳ ಮಾತು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು 8.5 ಕೋಟಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ 2.5 ಕೋಟಿ ರೂ. ವಂಚಕರಿಗೆ ನೀಡಿದ್ದರು. ಹಣ ಪಡೆದ ಬಳಿಕ ತಿಂಗಳು ಕಳೆದರೂ ಸಬೂಬು ಹೇಳುತ್ತಿದ್ದ. ಜತೆಗೆ ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಮಹಿಳೆ ಸಂತ್ರಸ್ತ ಮಹಿಳೆ ಸಿಸಿಬಿ ಠಾಣೆಗೆ ಜುಲೈ 29 ರಂದು ದೂರು ನೀಡಿದ್ದಾರೆ. ಮೂವರು ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಗುರೂಜಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು