ಕೆಲ ಜಿಲ್ಲೆಗಳಲ್ಲಿ ಇನ್ನಷ್ಟು ಬಿರುಗಾಳಿ ಬೀಸಲಿದೆ  
ರಾಜ್ಯ

ಬೆಂಗಳೂರು ನಗರ ಸೇರಿ ಇತರೆಡೆ ಮಳೆಗಿಂತ ಗಾಳಿ ಜಾಸ್ತಿ: ಜಿಲ್ಲೆಗಳಿಗೆ ಆರೆಂಜ್ ಅಲರ್ಟ್- winds more than rain

ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾನುವಾರವೂ ವರುಣಾರ್ಭಟ ಮುಂದುವರಿದಿದೆ. ಆದರೆ,  ಬೆಂಗಳೂರು ನಗರ ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಕೆಲ ಪ್ರದೇಶಗಳಲ್ಲಿ ಮಳೆ ಬದಲು ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಇದರಿಂದ ಶೀತ ವಾತಾವರಣ ನಿರ್ಮಾಣವಾಗುತ್ತಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇನ್ನಷ್ಟು ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. 
ಶಿವಮೊಗ್ಗದ ಆಗುಂಬೆ 15, ಉತ್ತರ ಕನ್ನಡದ ಮಂಕಿ 13 ಸೆಂಮೀ ವರ್ಷಧಾರೆಯಾಗಿದೆ. ಜತೆಗೆ, ಆ ಭಾಗದ ಕೆಲ ಭಾಗಗಳಲ್ಲೂ ಸರಾಸರಿ 6 ರಿಂದ 11 ಸೆಂಮೀವರೆಗೆ ಮಳೆ ಸುರಿದಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ  ಬೆಳಗಾವಿಯ ಕೆಲ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಮುಂದಿನ 5 ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ. ಬೆಳಗಾವಿ, ಧಾರವಾಡ, ವಿಜಯಪುರ, ರಾಯಚೂರಿನಲ್ಲಿಯೂ ಮುಂದಿನ 2 ದಿನ ಆರೆಂಜ್ ಅಲರ್ಟ್ ಇರಲಿದೆ. ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಗದಗ ಮತ್ತು ಬಳ್ಳಾರಿಯಲ್ಲಿ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. 
 315 ಮಿಮೀ ಮಳೆ:
ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ  ಜೂ 29ರಿಂದ ಜು.5ವರೆಗೆ ವಾಡಿಕೆಯಂತೆ 272 ಮಿಮೀ ಮಳೆಯಾಗಬೇಕಿತ್ತು.ಆದರೆ, 315 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.15 ಅಧಿಕವಾಗಿ ಸುರಿದಿದೆ.  ಮಲೆನಾಡಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಶೇ.17 ಕಡಿಮೆ ಮಳೆಯಾದರೆ, ದಕ್ಷಿಣ ಕರ್ನಾಟಕದಲ್ಲಿ ಮಳೆ ಕೊರತೆಯಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ತುಸು ಜಾಸ್ತಿ ಮಳೆಯಾಗಿದ್ದರೂ 7 ಜಿಲ್ಲೆಗಳಲ್ಲಿ ಮಳೆ ಅಭಾವವಾಗಿದೆ.