ಬೆಂಗಳೂರು : ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಮಹಾನ್ ಮಾನವತಾವಾದಿ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು ಮಾತ್ರವಲ್ಲ, ಇಡೀ ವಿಶ್ವದ ಗೌರವಕ್ಕೆ ಪಾತ್ರರಾದ ವಿಶ್ವಮಾನವರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು, ಬರೆಯುವುದು, ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಬಸವ ಸಮಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕ ರವಿ ಹಂಜ್ ಅವರು ರಚಿಸಿ, ವಿಶ್ವವಾಣಿ ಪ್ರಕಾಶನ ಪ್ರಕಟಿಸಿರುವ ‘ಬಸವ ಮಂಟಪ’ ಕೃತಿ ಬಿಡುಗಡೆಗೂ ಮುನ್ನ ನೀಡಿರುವ ಸಂದರ್ಶನದಲ್ಲಿನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸಿ, ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪರಿಚಯಿಸಿದರು. ಎಲ್ಲ ಕಾಯಕ, ಎಲ್ಲ ವರ್ಗ, ಮಹಿಳೆಯರು, ಶೋಷಿತರು, ಹಿಂದುಳಿದವರು ಸೇರಿದಂತೆ ಸಮಾಜದ ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯಬೇಕೆಂಬ ಆಶಯವನ್ನು ವಚನಗಳ ಮೂಲಕ ಸಾರಿದರು. ಇಂತಹ ಮಹಾನ್ ಚಿಂತಕರನ್ನು ಅವಹೇಳನ ಮಾಡುವುದು ಅವರ ವಿಚಾರಧಾರೆಗೆ ಧಕ್ಕೆ ತರುವ ಪ್ರಯತ್ನವಾಗಲಿದೆ. ಇಂತಹ ವಿವಾದವುಳ್ಳ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮವರೇ ನಮಗೆ ಮುಳುವಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ, ಕಸಾಪ ಮಾಜಿ ಅಧ್ಯಕ್ಷ ಮನುಬಳಿಗಾರ್ ಕೊಂಡಿ ಮಂಚಣ್ಣರಂತೆ ನಡೆದುಕೊಂಡಿದ್ದಾರೆ ಎಂದು ಎಂ.ಬಿ.ಪಾಟೀಲ್ ಅಸಮಾಧಾನ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಬಿ.ಆರ್.ಪಾಟೀಲ್, ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ್, ಮಾಜಿ ಮೇಯರ್ ಗಂಗಾಂಭಿಕಾ ಮಲ್ಲಿಕಾರ್ಜುನ್, ಪದ್ಮಶ್ರೀ ಎಸ್.ಜಿ.ಸುಶೀಲಮ್ಮ, ಮಾಜಿ ಉಪಮೇಯರ್ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಜೊತೆ ಚರ್ಚಿಸಿ ಮುಂದಿನ ಕ್ರಮ
ರವಿ ಹಂಜ್ ಅವರು ವಿಶ್ವವಾಣಿ ಪತ್ರಿಕೆಯ ಮೂಲಕ ಬಸವಣ್ಣನವರು ಮತ್ತು ಶರಣರ ಕುರಿತು ಇಲ್ಲ ಸಲ್ಲದ ವಿಚಾರಗಳ ಸರಣಿ ಲೇಖನಗಳನ್ನು ಪ್ರಕಟಿಸುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗಬೇಕು. ಬಸವಣ್ಣನವರು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಸಮಾಜದ ಭಾವನೆಗಳಿಗೆ ನೋವುಂಟು ಮಾಡಿದೆ. ಬಸವಣ್ಣನ ವಿಚಾರ ಬಂದಾಗ ವೀರಶೈವ ಲಿಂಗಾಯತರೆಲ್ಲರೂ ಒಂದೇ. ಸಮಾಜದ ಸ್ವಾಮೀಜಿಗಳು, ಸಂಘಟನೆಗಳು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡಲಿವೆ.
ಬಸವಣ್ಣನವರ ಘನತೆಗೆ ಧಕ್ಕೆ ತರುವ ಇಂತಹ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು, ಇತರ ಧರ್ಮಗಳನ್ನು ಗೌರವಿಸಬೇಕು, ಇದು ನಮ್ಮ ಸಂಸ್ಕೃತಿ. ಆದರೆ ಬಸವಣ್ಣನವರ ವಿಚಾರಧಾರೆ, ಶರಣರ ಪರಂಪರೆ ಮತ್ತು ಲಿಂಗಾಯತ ಅಸ್ಮಿತೆಯ ಮೇಲೆ ದಾಳಿ ಮಾಡುವ ರೀತಿಯಲ್ಲಿ ಯಾರೇ ಮಾತನಾಡಿದರು ಅದು ಸ್ವೀಕಾರಾರ್ಹವಲ್ಲ.ಅರವಿಂದ ಜತ್ತಿ, ಬಸವ ಸಮಿತಿ ಅಧ್ಯಕ್ಷ