ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- : ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿ
- ಅಕ್ರಮವಾಗಿ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್ ಹಾಗೂ ಕೆಲವು ಹೋಂ ಸ್ಟೇಗಳಲ್ಲಿ ವನ್ಯಜೀವಿಗಳ ಮಾರಣಹೋಮ
ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಅನಧಿಕೃತ ರೆಸಾರ್ಟ್ ಹಾಗೂ ಕೆಲವು ಹೋಂ ಸ್ಟೇಗಳಲ್ಲಿ ವನ್ಯಜೀವಿಗಳ ಮಾರಣಹೋಮ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನಿದೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೇಲುಕಾಮಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸಂಘಟನೆಯ ಹೊನ್ನೂರು ಪ್ರಕಾಶ್ ಮಾತನಾಡಿ, ಇತ್ತೀಚೆಗೆ ಸಂಘದ ಪದಾಧಿಕಾರಿಗಳು ಹೋಂ ಸ್ಟೇಗಳಲ್ಲಿ ನಡೆಯುತ್ತಿರುವ ವನ್ಯಜೀವಿ ಸಂಬಂಧಿತ ಅಕ್ರಮಗಳ ಕುರಿತು ಮಾಹಿತಿ ನೀಡಿದ ನಂತರವೇ ಅರಣ್ಯಾಧಿಕಾರಿಗಳು ದಾಳಿ ಮಾಡಿ ಜಿಂಕೆ ಕೊಂಬುಗಳು, ತಲೆಬುರುಡೆ ಹಾಗೂ ಚರ್ಮವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆದರೆ ಅದರ ನಿಜವಾದ ಮಾಲೀಕರ ವಿರುದ್ಧ ಕೇಸ್ ದಾಖಲಿಸುವ ಬದಲು ಸಿಬ್ಬಂದಿ ಮೇಲೆ ದಾಖಲಿಸಿದ್ದಾರೆ. ಇಂಥ ಅಕ್ರಮ ಹೋಂಸ್ಟೇಗಳಲ್ಲಿ ವನ್ಯಜೀವಿಗಳ ಬೇಟೆಯಾಡುತ್ತಿರುವ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಬೇಕು. ಬಂಡೀಪುರ ವ್ಯಾಪ್ತಿಯಲ್ಲಿರುವ ಇತರ ಹೋಂ ಸ್ಟೇಗಳನ್ನೂ ಸೂಕ್ತವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯುತ್ತಿದ್ದರೆ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲ ರವಿಕುಮಾರ್, ಮುಖಂಡ ರವಿಕಿರಣ್ ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕ್ರಮಕೈಗೊಳ್ಳದ ಅರಣ್ಯಾಧಿಕಾರಿ ಹಾಗೂ ಪ್ರಕರಣವನ್ನು ಬೆಳೆಕಿಗೆ ತಂದ ಕಾರ್ಯಕರ್ತರ ಮೇಲೆ ಧಮಕಿ ಹಾಕಿದ ಎಸಿಎಫ್ ಶುಭಂ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸುರೇಶ್, ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಕೆ.ಪಿ.ಸತೀಶ್ ಕುಮಾರ್ ಆಗಮಿಸಿ ಅಕ್ರಮವಾಗಿ ವನ್ಯಜೀವಿಗಳ ಕೊಂಬು ಸಂಗ್ರಹಿಸಿದ್ದ ಹೋಂಸ್ಟೇಯ ಮ್ಯಾನೇಜರ್‌ಅನ್ನು ಬಂಧಿಸಲಾಗಿದೆ. ಜಮೀನಿನ ಮಾಲೀಕರನ್ನೂ ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಷಣ್ಮುಖಸ್ವಾಮಿ, ಶಶಿ, ರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.