ವಿರಾಜಪೇಟೆ ತಾಲೂಕು ಕದನೂರು ಗ್ರಾಮದ ವ್ಯಾಪ್ತಿಯಲ್ಲಿನ ಗದ್ದೆಯಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡು. 
ರಾಜ್ಯ

ಕದನೂರಿಗೆ ಬಂದ ಕಾಡಾನೆಗಳು...

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬರುತ್ತಿರುವ ಕಾಡಾನೆಗಳು ಕಾಫಿ ತೋಟಗಳು ಹಾಗೂ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಕದನೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸುಮಾರು 13 ಕಾಡಾನೆಗಳ ಹಿಂಡು ಸ್ಥಳೀಯ ಗದ್ದೆಯಲ್ಲಿ ಬೀಡು ಬಿಟ್ಟಿದ್ದವು. ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಡಿಆರ್‌ಎಫ್ ರಾಘವ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಾಡಿನತ್ತ ಓಡಿಸಲಾಯಿತು. ಸಿಬ್ಬಂದಿ ಮಹೇಶ್, ಹರೀಶ್, ಅನಿಲ್, ಸುರೇಶ್, ಮುರುಗನ್ ಹಾಗೂ ಶ್ರೀನಿಧಿ ತಂಡ ಕಾರ್ಯಾಚರಣೆಯಲ್ಲಿತ್ತು.
ಹೆಚ್ಚಿದ ಕಾಡಾನೆ ಹಾವಳಿ:
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಕಾಫಿ ತೋಟಗಳು, ಗದ್ದೆಗಳು ಹಾಗೂ ಗ್ರಾಮಗಳ ಸಮೀಪ ಕಾಡಾನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ರೈತರು ಬೆಳೆ ಹಾನಿ ಜತೆಗೆ ಜೀವಭಯದಲ್ಲಿಯೇ ದಿನ ಕಳೆಯುವಂತಾಗಿದೆ. ಕಾಡಾನೆ ಹಾವಳಿ ತಡೆಗಟ್ಟಲು ಸರ್ಕಾರ ಮತ್ತು ಅರಣ್ಯ ಇಲಾಖೆ ವಿವಿಧ ಕ್ರಮ ಕೈಗೊಂಡಿದ್ದರೂ, ಶಾಶ್ವತ ಪರಿಹಾರ ದೊರಕಿಲ್ಲ ಎಂದು ರೈತರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.