ತಾಲೂಕಿನ ಅರೇಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದ ಗಂಗಾಧರ್ ಎಂಬುವವರ ಮನೆ ಮುಂದಿನ ಮರದಡಿ ನಿಲ್ಲಿಸಿದ್ದ ಕಾರು ಕಾಡಾನೆ ದಾಳಿಗೆ ಜಖಂಗೊಂಡಿರುವುದು.  
ರಾಜ್ಯ

ಮಲ್ಲಾಪುರದಲ್ಲಿ ಕಾರು ಜಖಂಗೊಳಿಸಿದ ಕಾಡಾನೆ

ಬೇಲೂರು: ಮಾವಿನ ಹಣ್ಣುಗಳನ್ನು ತಿನ್ನಲು ಅಡ್ಡಿಯಾದ ಕಾರನ್ನು ಕಾಡಾನೆಯೊಂದು ಎಳೆದಾಡಿ ಜಖಂಗೊಳಿಸಿರುವ ಘಟನೆ ತಾಲೂಕಿನ ಅರೆಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ತಾಲೂಕಿನ ಮಲ್ಲಾಪುರ ಗ್ರಾಮದ ಮೂಲಕ 10ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಕಳೆದ ರಾತ್ರಿ ಸಾಗುತ್ತಿತ್ತು. ಈ ಸಂದರ್ಭ ಮರಿಯೊಂದಿಗೆ ಬಂದ ಕಾಡಾನೆಯೊಂದು ರೈತ ಗಂಗಾಧರ್ ಅವರ ಮನೆಯ ಮುಂಭಾಗದಲ್ಲಿದ್ದ ಮಾವಿನ ಮರದಲ್ಲಿದ್ದ ಹಣ್ಣುಗಳನ್ನು ನೆಲಕ್ಕೆ ಕೆಡವಿ ತಿನ್ನಲು ಮುಂದಾಗಿದೆ. ಆದರೆ ನೆಲಕ್ಕೆ ಬಿದ್ದ ಕೆಲ ಹಣ್ಣುಗಳು ಮರದಡಿ ನಿಲ್ಲಿಸಿದ್ದ ಕಾರಿನ ಕೆಳಗೆ ಬಿದ್ದಿವೆ. ಅವುಗಳನ್ನು ತಿನ್ನಲು ಪ್ರಯತ್ನಿಸಿದ ಕಾಡಾನೆ ಕಾರನ್ನು ಅತ್ತಿಂದಿತ್ತ ಎಳೆದಾಡಿದೆ. ಇದರಿಂದಾಗಿ ಕಾರಿನ ಹಿಂಭಾಗದ ಹಾಗೂ ಕಿಟಕಿಯ ಗಾಜುಗಳು ಪುಡಿಯಾಗಿ, ಕಾರಿನ ಬಾನೆಟ್ ಸೇರಿದಂತೆ ಹಲವು ಭಾಗಗಳು ಹಾನಿಗೊಳಗಾಗಿವೆ. ಘಟನೆ ನಡೆದ ತಕ್ಷಣ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾಡಾನೆಗಳನ್ನು ಕಾಡಿನತ್ತ ಓಡಿಸಿದ್ದರಿಂದ ಗ್ರಾಮಸ್ಥರು ನಿಟ್ಟೂಸಿರು ಬಿಟ್ಟರೂ ಮತ್ತೆ ಯಾವಾಗ ಬರುತ್ತವೆ ಎಂಬ ಆತಂಕದಲ್ಲೇ ಗ್ರಾಮಸ್ಥರಿದ್ದಾರೆ.
ರೈತ ಗಂಗಾಧರ್ ಮಾತನಾಡಿ, ನಮ್ಮ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಲೆ ಇವೆ. ಆದರೆ ನಮ್ಮ ಮನೆಯ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಕಾರನ್ನು ಕಳೆದ ರಾತ್ರಿ ಮನೆ ಮುಂಭಾಗದ ಮಾವಿನ ಮರದಡಿ ನಿಲ್ಲಿಸಿದ್ದೆವು. ಆದರೆ ಹಿಂಡಿನಲ್ಲಿ ಬಂದಿದ್ದ ಕಾಡಾನೆಗಳ ಪೈಕಿ ಕಾಡಾನೆಯೊಂದು ಮಾವಿನ ಹಣ್ಣು ತಿನ್ನುವ ಸಂದರ್ಭ ಕಾರನ್ನು ಎಳೆದಾಡಿ ಹಾಳು ಮಾಡಿವೆ. ಮುಂದೆ ಪುನಃ ಇಂತಹ ಘಟನೆಗಳಿಗೆ ಅವಕಶವಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಾನೆಗಳನ್ನು ಗ್ರಾಮಗಳತ್ತ ಬಾರದಂತೆ ಕಾಡಿನಲ್ಲೇ ನಿಯಂತ್ರಿಸಿ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಕ್ರಮ ಕೈಗೊಳ್ಳಬೇಕು ಎಂದರು.