Wife pays tribute to her husband while he was still alive!
ಗೌರಿಬಿದನೂರು: ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದ ಪತ್ನಿಯು ಮಕ್ಕಳನ್ನು ಕರೆತರಲು ಹೋಗಿದ್ದ ಪತಿ ಹಾಗೂ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಲ್ಲದೇ, ಬದುಕಿರುವ ಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ...!
ಸಾಗಾನಹಳ್ಳಿಯ ಅನುಜಾ ಹಾಗೂ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿಯ ಕುಮಾರ್ ಜತೆ 9ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಮಾರ್ ಬೆಂಗಳೂರಿನಲ್ಲಿ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿಯ ಆಸೆಯಂತೆ 5 ವರ್ಷಗಳಿಂದ ದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ದಂಪತಿ ವಾಸವಾಗಿದ್ದರು. ಪತ್ನಿಯ ಶೋಕಿ ಜೀವನದ ಆಸೆಯಿಂದಾಗಿ ಪತಿ ಕುಮಾರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಇದೇ ಕಾರಣಕ್ಕೆ ಐದಾರು ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು ಎನ್ನಲಾಗಿದೆ.
ಬದುಕಿದ್ದ ಗಂಡನಿಗೆ ಶ್ರದ್ಧಾಂಜಲಿ!: ಇದ್ದಕ್ಕಿದ್ದಂತೆ ಅನುಜಾ ಪತಿಗೆ ತಿಳಿಸದೆ ದೇವನಹಳ್ಳಿ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಮಕ್ಕಳ ಜತೆಗೆ ತವರು ಸೇರಿಕೊಂಡಿದ್ದಳು. ವಾಪಸ್ ಬರುವಂತೆ ಕುಮಾರ್ ಎಷ್ಟು ಕೇಳಿದರೂ ಪ್ರಯೋಜನವಾಗಿಲ್ಲ. ಬದಲಿಗೆ ತನ್ನ ಪತಿಗೆ ಶ್ರದ್ಧಾಂಜಲಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ. ಕುಮಾರ್ ತನ್ನ ಸಂಬಂಧಿ ಯುವಕರ ಜತೆ ಪತ್ನಿಯ ತವರಿಗೆ ಹೋಗಿ ವಿಚಾರಿಸಿದಾಗ ಕುಮಾರ್ ಮತ್ತು ಅನುಜಾ ಅಣ್ಣ ಭಾಸ್ಕರ್ ನಡುವೆ ಜಟಾಪಟಿ ಶುರುವಾಗಿದೆ. ಭಾಸ್ಕರ್ ಹಾಗೂ ಸಂಬಂಧಿಕರಾದ ಸುರೇಶ್, ವೆಂಕಟೇಶ್ ಇತರರು ಸೇರಿ ಕುಮಾರ್ ಕಾರಿನ ಮೇಲೆ ದಾಂಧಲೆ ಮಾಡಿದ್ದಾರೆ. ಕುಮಾರ್ ಮತ್ತು ಸಂಬಂಧಿಕರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಿಂದ ಕುಮಾರ್ ಸೇರಿ ಇಬ್ಬರು ಗಂಭೀರ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಹೆಂಡತಿ ಕಡೆಯವರು ಪರಾರಿಯಾಗಿದ್ದಾರೆ.