ಕೊಲೆಯಾದ ವೈದ್ಯ ಕಿರಣ್ ದಂಪತಿ
- ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಡಾ. ಕಿರಣ್
- ಗಂಡನನ್ನು ಇರಿದು ಕೊಂದ ಆರೋಪಿ ಪತ್ನಿ ಪ್ರಿಯಾಂಕಾ
- ಧಾರವಾಡದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ಘಟನೆ
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಪತಿಯನ್ನು ಇರಿದು ಕೊಂದಿರುವ ಮಹಿಳೆ, ತನ್ನ 8 ವರ್ಷದ ಮಗನ ಮೇಲೂ ಚಾಕುವಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಡಾ. ಕಿರಣ್, ತಮ್ಮ ಪತ್ನಿ ಪ್ರಿಯಾಂಕಾಳಿಂದಲೇ ಕೊಲೆಯಾದ ದುರ್ದೈವಿ. ಅಪಾರ್ಟ್ಮೆಂಟ್ನಲ್ಲಿ ಪತಿ, ಪತ್ನಿ, ಮಗ ಮೂವರು ಒಟ್ಟಿಗೆ ವಾಸಿಸುತ್ತಿದ್ದರು. ಕೌಟುಂಬಿಕ ಕಾರಣದಿಂದ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯಲ್ಲಿ ಡಾ. ಕಿರಣ್ ಸಾವಿಗೀಡಾಗಿದ್ದರೆ, ಅವರ 8 ವರ್ಷ ಪುತ್ರ ಬದುಕಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಚಿಕಿತ್ಸೆಗಾಗಿ ಬಾಲಕನನ್ನು ಆಸ್ಪತ್ರೆಗೆ ರವಾನಿಸಿದರು. ಈ ವೇಳೆ ಘಟನಾ ಸ್ಥಳದಲ್ಲೇ ಇದ್ದ ಪ್ರಿಯಾಂಕಾಳನ್ನು ವಶಕ್ಕೆ ಪಡೆಯಲಾಗಿದೆ.