ದೇವನಹಳ್ಳಿ:
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚನೆಗೊಳಗಾಗಿ ಅರ್ಥಿಕ ನಷ್ಟ ಎದುರಿಸಿದ್ದರು ಎನ್ನಲಾದ ಕನ್ನಮಂಗಲ ನಿವಾಸಿ ನಾಗರತ್ನಮ್ಮ (55) ಮಂಗಳವಾರ ಮೊಬೈಲ್ನಲ್ಲಿ ವಾಯ್ಸ್ ಮೆಸೇಜ್ ಹಾಕಿ ಬಳಿಕ ನೇಣಿಗೆ ಶರಣಾಗಿದ್ದಾರೆ.
ಏನಿದು ಪ್ರಕರಣ?
ಕನ್ನಮಂಗಲ ನಿವಾಸಿ ವೆಂಕಟಸ್ವಾಮಿ ಹಾಗೂ ನಾಗರತ್ನಮ್ಮ ಕೆಲವು ವರ್ಷಗಳಿಂದ ರಿಯಲ್ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಭೂ ವ್ಯವಹಾರದಲ್ಲಿ ಸಾಕಷ್ಟು ಹಣ ಹೂಡಿಕೆೆ ಮಾಡಿದ್ದಾರೆ. ಜತೆಗೆ ಪರಿಚಯಸ್ಥರಿಂದಲೂ ಹಣ ಹೂಡಿಕೆ ಮಾಡಿಸಿದ್ದರು. ಆದರೆ, ವ್ಯವಹಾರದಲ್ಲಿ ವಂಚನೆಯಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು. ಇವರ ಮೂಲಕ ಹಣ ಹೂಡಿಕೆ ಮಾಡಿದ್ದವರು ಹಣ ವಾಪಸ್ ನೀಡುವಂತೆ ದಂಪತಿಗೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.
ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪತಿ ನಾಪತ್ತೆ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆದ ವಂಚನೆ ಬಗ್ಗೆ ಪತಿ ವೆಂಕಟಸ್ವಾಮಿ ವಿಡಿಯೋ ಮಾಡಿ, ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ. ಲಾಭದ ಆಸೆ ತೋರಿಸಿ ನಮ್ಮಿಂದ ಹಣ ಪಡೆದು ನಮ್ಮ ಮೂಲಕ ಇತರರಿಂದಲೂ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ. ಹಣ ವಾಪಸ್ ಮಾಡದೆ ಸತಾಯಿಸುತ್ತಿದ್ದಾರೆ ಎಂದು ವಾಯ್ಸ್ ಮೆಸೇಜ್ ಹಾಕಿ ಕೆಲವರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.