ಚಡಚಣ ಭಾಗದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರ ಜೊತೆ ಬರ ಪರಿಶೀಲನೆ ನಡೆಸಿದರು. 
ರಾಜ್ಯ

ಅಂಡಮಾನ್‌ಗೆ ಹೋಗಿದ್ದ ರಾಹುಲ್ ಗಾಂಧಿ ಬಿಡದಿಗೇಕೆ ಬರಲ್ಲ, ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಪ್ರಮುಖ ಮುಖ್ಯಾಂಶಗಳು

  • ಬಿಡದಿಯಲ್ಲಿ ನಮ್ಮದು 36 ಎಕರೆ ಇದೆ
  • ಹಲವು ದಶಕಗಳ ಹಿಂದೆ ಖರೀದಿಸಿದ್ದು
  • ಕೋವಿಡ್ ಟೈಮ್‌ಲ್ಲಿ ಡೈರಿ ಮಾಡುವ ಯೋಚನೆ ಇತ್ತು
  • ಮೂಲ ಸೌಕರ್ಯ ಸಚಿವರು ವಿಶಾದ ವ್ಯಕ್ತಪಡಿಸಿದ್ದಾರೆ
ವಿಜಯಪುರ: ಮರಗಳ ರಕ್ಷಣೆಗಾಗಿ ಅಂಡಾಮಾನ್‌ಗೆ ತೆರಳಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬಿಡದಿಗೆ ಏಕೆ ಬರಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷನ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು ಲಕ್ಷಾಂತರ ಮರಗಳು ಹಾಳಾಗುತ್ತಿವೆ ಎಂದು ಅಂಡಮಾನ್ ನಿಕೋಬಾರ್‌ಗೆ ಭೇಟಿ ನೀಡುತ್ತಾರೆ. ಬಿಡದಿಯಲ್ಲೂ ತೆಂಗು, ಅಡಕೆ, ಮತ್ತಿತರ ಹಣ್ಣು-ಹೂ ಮತ್ತು ತರಕಾರಿ ಬೆಳೆಯಲಾಗುತ್ತದೆ. ಹೀಗಾಗಿ ರಾಹುಲ್ ಗಾಂಧಿ ಬಿಡದಿಗೆ ಬರಲಿ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಬಿಡದಿಯಲ್ಲಿ 490ಕ್ಕೂ ಹೆಚ್ಚು ದಿನ ರೈತರು ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾರೆ. ಫಲವತ್ತಾದ ಜಮೀನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಹೋರಾಟದ ಸಂದರ್ಭದಲ್ಲೇ ಅಧಿಕಾರಿಗಳು ಸಮೀಕ್ಷೆಗೆ ಬಂದಿದ್ದರಿಂದ ಸಹಜವಾಗಿಯೇ ಪೊರಕೆ ಹಿಡಿದಿದ್ದಾರೆ. ಬಿಡದಿಯಲ್ಲಿ 9600 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿದ್ದಾರೆ. ಈಗಾಗಲೇ ಲಕ್ಷಾಂತರ ಎಕರೆ ಭೂ ಸ್ವಾಧೀನ ಆಗಿ ಹೋಗಿದೆ. ರೈತರಿಗೆ ಗೊತ್ತಿಲ್ಲದೇ ಕೆಲವೊಂದು ಚಟುವಟಿಕೆಗಳು ನಡೆಯುತ್ತಿವೆ. ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡ ಭೂಮಿ ಪಾಳು ಬಿದ್ದಿದೆ. ಹೀಗಾಗಿ ಸಹಜವಾಗಿಯೇ ರೈತರು ಆಕ್ರೋಶಗೊಂಡಿದ್ದಾರೆ ಎಂದರು.
ಚಡಚಣ ಭಾಗದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರ ಜೊತೆ ಬರ ಪರಿಶೀಲನೆ ನಡೆಸಿದರು.

ಎಫ್‌ಐಆರ್ ಮೂಲಕ ರೈತರನ್ನು ಕಟ್ಟಿ ಹಾಕುತ್ತೇವೆ ಎಂಬ ಉದ್ಧಟತನದಿಂದ ಹೊರಟರೆ ಸರಿಯಿರಲ್ಲ. ರೈತರು ತಿರುಗಿ ಬಿದ್ದರೆ ಯಾವ ಸರ್ಕಾರ ಸಹ ಉಳಿಯಲ್ಲ. ಸರ್ಕಾರದ ಮರಣ ಶಾಸನದ ವಿರುದ್ಧ ರೈತರು ಧ್ವನಿ ಎತ್ತಿದ್ದಕ್ಕೆ ಜನತಾದಳ ಸ್ವಾಗತಿಸಲಿದೆ. ಕೆಲವರು ರೈತರು ಪರಿಹಾರಕ್ಕೆ ಒಪ್ಪಿದರೆ ಕೆಲವರದ್ದು ವಿರೋಧ ಇದೆ. ಹೀಗಾಗಿ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದರು.
ಬಿಡದಿಯಲ್ಲಿ ಕುಮಾರಸ್ವಾಮಿ ಅವರ ನೂರಾರು ಎಕರೆ ಜಮೀನು ಇದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಈಗಾಗಲೇ ಸಚಿವ ಎಂ.ಬಿ.ಪಾಟೀಲರು ಈ ವಿಚಾರದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಅಲ್ಲಿ ನಮ್ಮದಿರೋದು 36 ಎಕರೆ ಜಮೀನು. ಅದು ಸಹ ಹಲವಾರು ದಶಕಗಳ ಹಿಂದೆ ತೆಗೆದುಕೊಂಡಿರುವಂಥದ್ದು. ಅಲ್ಲಿ ಡೈರಿ ಮಾಡುವುದು ನಮ್ಮ ತಂದೆಯ ಆಶಯ ಇತ್ತು. ಕರೊನಾ ಟೈಮಲ್ಲಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಆಗಿಲ್ಲ. ಅದು ಬಿಟ್ಟು ಅಲ್ಲಿ ಯಾವುದೇ ಲೇಔಟ್ ಮಾಡಿಲ್ಲ, ನಾವು ರಿಯಲ್ ಎಸ್ಟೇಟ್‌ನವರು ಅಲ್ಲ ಎಂದರು.
ಚಡಚಣ ಭಾಗದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರ ಜೊತೆ ಬರ ಪರಿಶೀಲನೆ ನಡೆಸಿದರು.

ವಿಜಯಪುರ ಜಿಲ್ಲೆಯಲ್ಲಿಯೂ ಕೈಗಾರಿಕೆ ಉದ್ದೇಶಕ್ಕಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವ ಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಅವರು, ರೈತರು ಎಲ್ಲರೂ ಒಂದೆ. ಆ ಭಾಗ ಈ ಭಾಗ ಅಂತಿಲ್ಲ. ಇಲ್ಲಿಯ ರೈತರು ಸಹ ಗಮನಕ್ಕೆ ತಂದಿದ್ದಾರೆ. ಕುಮಾರಣ್ಣನ ಗಮನಕ್ಕೆ ತಂದು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಬರದ ಅಧ್ಯಯನ ವರದಿ

ರಾಜ್ಯದಲ್ಲಿ ಬರ ಆವರಿಸಿದ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ವರದಿ ಸಿದ್ಧಪಡಿಸಿ ಕುಮಾರಣ್ಣನವರಿಗೆ ಸಲ್ಲಿಸಲಾಗುವುದು. ಬಳಿಕ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸಲೆತ್ನಿಸುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮುಂಗಾರು ನಂಬಿ ರೈತಾಪಿ ವರ್ಗ ಬಿತ್ತನೆ ಮಾಡಬೇಕಿತ್ತು. ಒಟ್ಟು 5.5 ಲಕ್ಷ ಹೆಕ್ಟರ್ ಗುರಿ ಇತ್ತು. ಈವರೆಗೆ ಕೇವಲ 1.3 ಲಕ್ಷ ಹೆಕ್ಟರ್ ಮಾತ್ರ ಬಿತ್ತನೆಯಾಗಿದೆ. ಅದರಲ್ಲೂ ಬಿತ್ತನೆ ಮಾಡಿದ ಕೆಲವು ರೈತರು ಮುಂಗಾರು ಕೈ ಹಿಡಿಯುತ್ತದೆ ಎಂದು ನಂಬಿ ತೊಗರಿ, ಹತ್ತಿ, ಮೆಕ್ಕೆಜೋಳ ಬಿತ್ತಿದ್ದಾರೆ. ಅಂಥವರಿಗೆ ಈಗ ಸಂಕಷ್ಟ ಎದುರಾಗಿದೆ. ಸಾಲದ ಹೊರೆ ಜಾಸ್ತಿಯಾಗಿದೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ರಾಜ್ಯ ಸರ್ಕಾರ ಪರಿಹಾರ ಏನು ಕಂಡುಕೊಳ್ಳಬೇಕೆಂದು ವರದಿ ನೀಡಲಾಗುವುದು ಎಂದರು.
ಇಂಡಿ, ಚಡಚಣ ಹಾಗೂ ಬ.ಬಾಗೇವಾಡಿ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ದಿನ ಸಂಚರಿಸಿ ರೈತರ ಜೊತೆ ಭಾಗಿಯಾಗಿ ಬರ ಪರಿಶೀಲನೆ ಮಾಡಲಾಗಿದೆ. ರೈತರ ಒಡನಾಡಿಗಳಾದ ಎತ್ತುಗಳಿಗೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿದ್ದು ನಮ್ಮ ಭಾಗ್ಯ ಎಂದರು.