ಡಿಕೆಶಿ-ಎಚ್‌ಡಿಕೆ ವಾರ್: 
ರಾಜ್ಯ

ಡಿಕೆಶಿ-ಎಚ್‌ಡಿಕೆ ವಾರ್: ವಿಡಿಯೋ ಮಾಡಿದ್ದ ಅಪರಾಧಿ ಬಿಟ್ಟು ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದೇಕೆ? ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದ ದಿನದಿಂದ ದಿನಕ್ಕೆ ತಾರಕ್ಕಕ್ಕೇರುತ್ತಿದ್ದು, ಜೆಡಿಎಸ್ ಸಾಮಾಜಿಕ ಜಾಲತಾಣದ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದ ದಿನದಿಂದ ದಿನಕ್ಕೆ ತಾರಕ್ಕಕ್ಕೇರುತ್ತಿದ್ದು, ಜೆಡಿಎಸ್ ಸಾಮಾಜಿಕ ಜಾಲತಾಣದ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬೆಳವಣಿಗೆಯು ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಎಚ್‌ಡಿಕೆ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಸ್ಫೋಟಗೊಳಿಸಿದೆ.

ಈ ವಿಷಯವಾಗಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಎಂಟು ವರ್ಷಗಳಿಗೂ ಹೆಚ್ಚುಕಾಲ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ ವ್ಯವಸ್ಥಿತ, ಸಂಘಟಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ನನ್ನ ಜೊತೆಗಿರುವ ಹುಡುಗರನ್ನು ಟಾರ್ಗೆಟ್ ಮಾಡುತ್ತಿರುವುದು ಲಜ್ಜೆಗೆಡಿತನ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಪ್ರಕರಣ ದಾಖಲಿಸದೇ ಇದ್ದರು ಸಹ ಇಂದು ಜೆಡಿಎಸ್​​ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎನ್ನುವ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಇದಾದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗ ದೂರು ದಾಖಲಿಸಿದ ಮೇಲೆ ಆ ಯುವಕನಿಂದ ಆತನ ಪತ್ನಿಗೆ ಕರೆ ಮಾಡಿಸಿ, ಸಿಸಿಬಿ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ ಎಂದಷ್ಟೇ ಹೇಳಿಸಿ ಕರೆ ಕಟ್ ಮಾಡಿದ್ದಾರೆ. ಈ ರೀತಿಯ ಕಪಟ ನಾಟಕ ಈಗಲೇ ನಿಲ್ಲಿಸಬೇಕು ಯಾವ ಆಧಾರದ ಮೇಲೆ ನಮ್ಮ ಕಾರ್ಯಕರ್ತನನ್ನು ಪೊಲೀಸ್​ರು ಕರೆದುಕೊಂಡು ಹೋಗಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಚನನ್ನು ಬಿಟ್ಟು ನನ್ನ ಹುಡುಗರ ಮೇಲೆಕೆ ಕಣ್ಣು..?

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್​ ಮಾಡಿ, ದೃಶ್ಯಗಳನ್ನು ಚಿತ್ರೀಕರಿಸಿ ಅವರ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ನನ್ನನ್ನು ನೇರವಾಗಿ ಎದುರಿಸಲಾಗದೆ ನನ್ನ ಹುಡುಗರ ಬೆನ್ಹತ್ತಿದ್ದಾರೆ. ಎಲ್ಲವನ್ನೂ ರೆಕಾರ್ಡ್ ಮಾಡಿದ ಮಾಧ್ಯಮದ ಮುಸುಕು ಹಾಕಿಕೊಂಡಿರುವ ಆ ಸಂಚುಕೋರ ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಬಿಟ್ಟು ನಮ್ಮ ಜಾಲತಾಣಗಳ ಹುಡುಗರ ಮೇಲೆ ಯಾಕೆ ಕಣ್ಣಿಟ್ಟಿದ್ದೀರಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಸ್ಟಿಂಗ್​ ಆಪರೇಷನ್​ ವಿಷಯವಾಗಿ ಪ್ರಶ್ನೆ ಮಾಡಿದ್ದು ನಾನು, ಸಿಬಿಐ ತನಿಖೆಗೆ ಒತ್ತಾಯಿಸಿದವನು ನಾನು ಎಂದಿರುವ ಕುಮಾರಸ್ವಾಮಿ ಅವರು, ಧೈರ್ಯವಿದ್ದರೆ ನನ್ನ ಬಳಿಯೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅದನ್ನು ಬಿಟ್ಟು ಅಮಾಯಕರ ಮೇಲೇಕೆ ಇವರು ತಮ್ಮ ಪ್ರತಾಪ ತೋರಿಸುತ್ತಿದ್ದಾರೆ ಎಂದು ಎಚ್​ಡಿಕೆ ಪ್ರಶ್ನಿಸಿದ್ದಾರೆ.

ಇದಷ್ಟೇ ಅಲ್ಲ, ಈಗ ನಮ್ಮ ಸೋಶಿಯಲ್ ಮೀಡಿಯಾ ತಂಡದ ಮೋಹನ್ ಎಂಬ ಇನ್ನೊಬ್ಬ ಹುಡುಗನ ಮನೆ ಮುಂದೆ ಹೋಗಿ ಪೊಲೀಸರು ಗಲಾಟೆ ಮಾಡುತ್ತಿದ್ದಾರೆ, ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇದೆಲ್ಲವನ್ನೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮವರಿಗೆ ಹೀಗೆ ಸುಖಾಸುಮ್ಮನೆ ಕಿರುಕುಳ ಕೊಟ್ಟರೆ ಕೈಕಟ್ಟಿ ಕೂರುವುದಿಲ್ಲ ಎಂದಿರುವ ಕುಮಾರಸ್ವಾಮಿ ಅವರು, ಈ ಷಡ್ಯಂತ್ರವನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ನಾವೆಲ್ಲಾ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.