ಸಾಂದರ್ಭಿಕ ಚಿತ್ರ  
ರಾಜ್ಯ

ವಾಸ್ತುವಿನ್ಯಾಸ ನಗರ ಪ್ರದೇಶಕ್ಕೆ ಸೀಮಿತವೇಕೆ?

ಮನುಷ್ಯನ ಜೀವನದ ಗೊತ್ತು-ಗುರಿಗಳನ್ನು ನಿರ್ಣಯಿಸುವಲ್ಲಿ ಪ್ರಮುಖವಾಗಿರುವ ರಜೋ, ತಮೋ ಮತ್ತು ಸತ್ವ ಗುಣಗಳ ಬಳಕೆಯ ಹಿಂದೆ ಪರಿಸರದಲ್ಲಿರುವ ಚೈತನ್ಯ ಶಕ್ತಿಯ ಸದ್ಭಳಕೆ ಅವಶ್ಯಕ. ವಾಸ್ತವದಲ್ಲಿ ಮನುಷ್ಯ ಪರಿಸರದ ಅಧೀನವಾಗಿಯೇ ಬದುಕಬೇಕಾದ ಕಾರಣ ಆ ಪರಿಸರಕ್ಕೆ ವಿರುದ್ಧವಾಗಿ ಜೀವಿಸಲು ಸಾಧ್ಯವಿಲ್ಲ. ಆದ್ದರಿಂದ ಪರಿಸರದಲ್ಲಿರುವ ಚೈತನ್ಯ ಶಕ್ತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಮನುಷ್ಯ ವಾಸ ಮಾಡುವ ಸ್ಥಳದಲ್ಲಿ ಬೇರೆ ಬೇರೆ ಕಾರಣಕ್ಕೆ ಬಳಸುವ ಕೋಣೆಗಳ ಮೂಲ ಆಶಯಕ್ಕೆ ಅನುಗುಣವಾಗಿ ಸದ್ಬಳಕೆ ಮಾಡುವುದೇ ನಿಜವಾದ ವಾಸ್ತು. ಆದರೆ ಈ ಮೂಲ ಅಂಶ ಇಂದಿನ ಆಧುನಿಕ ವಾಸ್ತುವಿನ್ಯಾಸದಲ್ಲಿ ಕಾಣದಾಗಿದೆ.

ಯಾವುದೇ ಸರ್ಕಾರ ಯೋಜನೆಗಳನ್ನು ರೂಪಿಸುವಾಗ; ನಗರ-ಗ್ರಾಮೀಣ ಎಂದು ವಿಭಾಗಿಸದೆ ಎಲ್ಲ ಜನರಿಗೂ ಅದರ ಪ್ರಯೋಜನ ದೊರೆಯುವಂತೆ ರೂಪಿಸಬೇಕು. ಉದಾಹರಣೆಗೆ ಶಿಕ್ಷಣ, ಆಹಾರ, ಆರೋಗ್ಯ ಇತ್ಯಾದಿ ಮೂಲಭೂತ ಅಂಶಗಳು ಎಲ್ಲರಿಗೂ ಅವಶ್ಯಕ. ಇಂತಹ ಅಂಶಗಳ ಮೇಲೆ ಪ್ರಭಾವ ಹೊಂದಿರುವ ವಾಸ್ತುಶಾಸ್ತ್ರವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವಲ್ಲಿ ಆಡಳಿತಾರೂಢ ಸರ್ಕಾರಗಳು ವಿಫಲವಾಗಿವೆ. ವಾಸ್ತುವಿನ್ಯಾಸವನ್ನು ನಗರಗಳಿಗೆ ಸೀಮಿತ ಮಾಡುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನ್ಯಾಯವಾಗುತ್ತಿದೆ. ದೇಶ ಅಥವಾ ರಾಜ್ಯದ ಅಭಿವೃದ್ಧಿಯ ನಿರ್ಣಯಗಳನ್ನು ಕೈಗೊಳ್ಳುವಾಗ ಕೇವಲ ನಗರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಕೈಗಾರಿಕೆಗಳು, ಕಂಪನಿಗಳು, ಕಟ್ಟಡಗಳು, ಸರ್ಕಾರದ ಆಡಳಿತ ಕೇಂದ್ರಗಳನ್ನು ನಿರ್ವಿುಸುವುದರಿಂದ ಹಳ್ಳಿಗಳ ಅಭಿವೃದ್ಧಿಯಾಗದೇ ಅಲ್ಲಿನ ವಾಸ್ತು ಬೆಳವಣಿಗೆಗೆ ದಕ್ಕೆಯಾಗಲಿದೆ. ಇದನ್ನು ಸರಿದೂಗಿಸುವಲ್ಲಿ ವಾಸ್ತುವಿನ್ಯಾಸಕಾರರ ಜವಾಬ್ದಾರಿ ಕೂಡ ಇದೆ.

ಗ್ರಾಮೀಣಾಭಿವೃದ್ಧಿಯಿಂದ ದೇಶದ ಪ್ರಗತಿ: ದೇಶದ ಅಭಿವೃದ್ಧಿಯಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಯಾಗಬೇಕು ಎಂಬ ಮಾತು ಸ್ವಾತಂತ್ರ್ಯ ಬಂದಾಗಿನಿಂದಲೂ ಕೇಳಿಬರುತ್ತಿದೆ. ಆದರೆ ಅಭಿವೃದ್ಧಿಗೆ ಬೇಕಾದ ಸರಿಯಾದ ಯೋಜನೆ ಇಲ್ಲದೆ ಅದು ಸಾಧ್ಯವಾಗಿಲ್ಲ. ದೇಶದ ಬೆನ್ನೆಲುಬು ಎನಿಸಿರುವ ರೈತ ಇರುವುದು ಹಳ್ಳಿಯಲ್ಲಿ. ಆತನ ಅನುಕೂಲಕ್ಕಾಗಿ ಹಳ್ಳಿಗಳಲ್ಲಿ ಆಗಬೇಕಾದ ಕಾರ್ಯಗಳು ಸಾಕಷ್ಟಿವೆ. ಅವುಗಳನ್ನು ವಾಸ್ತುವಿನ್ಯಾಸ ಅಡಿಯಲ್ಲಿ ಕೈಗೆತ್ತಿಕೊಳ್ಳಬೇಕು. ಉದಾಹರಣೆಗೆ ರೈತ ಬೆಳೆದ ಬೆಳೆಗಳನ್ನು ಖರೀದಿಸಲು ಗ್ರಾಮ ಮಟ್ಟದಲ್ಲಿ ಮಾರುಕಟ್ಟೆಗಳನ್ನು ನಿರ್ವಿುಸಬೇಕು. ಇದರಿಂದ ಹಳ್ಳಿಯ ಅಭಿವೃದ್ಧಿಯಾಗುತ್ತದೆ. ವ್ಯಾವಹಾರಿಕ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ಸರಕು ಸಾಗಾಟ, ವಾಹನ ಸಂಚಾರ ಹೆಚ್ಚುವುದರಿಂದ ಹಳ್ಳಿಯಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟಿಗೆ ಚಾಲನೆ ದೊರೆಯುತ್ತದೆ. ವಾಸ್ತುವಿನ್ಯಾಸದ ಪ್ರಯೋಜನಗಳು ವಿವಿಧ ರೀತಿಯಲ್ಲಿ ಅಭಿವೃದ್ಧಿಗೆ ಅವಕಾಶ ನೀಡುತ್ತವೆ.

ನಗರ ಪ್ರದೇಶಗಳಲ್ಲಿರುವಂತೆ ಯೋಜನಾಬದ್ಧವಾದ, ವಾಸ್ತು ವಿಜ್ಞಾನಕ್ಕೆ ಅನುಗುಣವಾಗಿ ವಾಸ್ತುವಿನ್ಯಾಸಕಾರ ಹಳ್ಳಿಗಳಲ್ಲಿನ ರಸ್ತೆ, ಮತ್ತಿತರ ಮೂಲಸೌಲಭ್ಯಗಳನ್ನು ರೂಪಿಸುವುದರಿಂದ ಹಳ್ಳಿಗಳ ಬೆಳವಣಿಗೆ ಸಾಧ್ಯ. ಬಹುತೇಕ ಸಂದರ್ಭಗಳಲ್ಲಿ ಕೇವಲ ಹಿರಿಯ ಅಧಿಕಾರಿಗಳು, ಇಂಜಿನಿಯರ್​ಗಳು ಯೋಜನೆ ರೂಪಿಸುವುದರಿಂದ ವಾಸ್ತುವಿನ್ಯಾಸದಲ್ಲಿ ಸರಿಯಾದ ಪ್ರಯೋಜನ ದೊರೆಯುತ್ತಿಲ್ಲ. ವಾಸ್ತುವಿನ್ಯಾಸ ಒಂದು ಪ್ರತ್ಯೇಕ ವಿಜ್ಞಾನ. ಇದು ಇಂಜಿನಿಯರ್ಸ್ ಅಥವಾ ಅಧಿಕಾರಿಗಳಿಗೆ ಸಂಬಂಧಿಸಿದ್ದಲ್ಲ. ಜನರ ಹಿತಾಸಕ್ತಿಯನ್ನು ಅರಿತು ಕಟ್ಟಡದ ವಿನ್ಯಾಸ ಮತ್ತು ಗ್ರಾಮಗಳ ರಚನೆಯನ್ನು ಮಾಡಬೇಕು. ಈ ಕೆಲಸ ವಾಸ್ತುವಿನ್ಯಾಸಕರಿಂದ ಸಾಧ್ಯವಿದೆ.

ವಾಸ್ತುವಿನ್ಯಾಸ ಶಿಕ್ಷಣ ಕ್ರಮದಲ್ಲಿ ಮಾರ್ಪಾಡು ಅಗತ್ಯ: ಸಾಮಾನ್ಯ ವಾಗಿ ಎಲ್ಲ ಶಿಕ್ಷಣ ಕೋರ್ಸ್​ಗಳಲ್ಲಿ ಥಿಯರಿ, ಪ್ರಾಕ್ಟಿಕಲ್, ಸ್ಟಡಿ ವಿಸಿಟ್ ಇತ್ಯಾದಿ ವಿಧಾನಗಳಿವೆ. ಅಂತೆಯೇ ಆರ್ಕಿಟೆಕ್ಚರ್ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಅಂಶಗಳಿದ್ದು, ಅವುಗಳಲ್ಲಿ ಕೆಲ ಮಾರ್ಪಾಡು ಅಗತ್ಯವಿದೆ.

  • ವಿದ್ಯಾರ್ಥಿಗಳಿಗೆ ಹಳ್ಳಿಗಳ ಭೇಟಿ ಕಡ್ಡಾಯಗೊಳಿಸಬೇಕು. 
  •  ಹಳ್ಳಿಯ ವಿವಿಧ ವರ್ಗಗಳ ಜೀವನಕ್ರಮವನ್ನು ತಿಳಿದುಕೊಳ್ಳಬೇಕು.
  • ಗ್ರಾಮೀಣ ಆಚರಣೆ, ಪದ್ದತಿ, ಸಹಜೀವನದ ಅಧ್ಯಯನ ಅಗತ್ಯ.
  • ಕೌಟುಂಬಿಕ ಉದ್ಯೋಗ, ಕುಲಕಸುಬು, ವ್ಯವಹಾರದ ಪರಿಚಯವಿರಬೇಕು.
  • ಪ್ರಾದೇಶಿಕ ಕೌಶಲತೆಯನ್ನು ಅರಿತುಕೊಳ್ಳಬೇಕು.
  • ಗ್ರಾಮಮಟ್ಟದಲ್ಲಿ ಶಾಲೆ, ಬ್ಯಾಂಕ್, ಆಸ್ಪತ್ರೆ, ಮಾರುಕಟ್ಟೆ, ರಸ್ತೆ ಮತ್ತಿತರ ಮೂಲಭೂತ ವ್ಯವಸ್ಥೆಯ ಬಗ್ಗೆ ಮಾಹಿತಿ ಇರಬೇಕು.

ಒಬ್ಬ ವಾಸ್ತುವಿನ್ಯಾಸದ ವಿದ್ಯಾರ್ಥಿ ತನ್ನ ಶಿಕ್ಷಣದ ಸಂದರ್ಭದಲ್ಲಿ ಈ ಮೇಲಿನ ಅಧ್ಯಯನಗಳನ್ನು ಮಾಡಿದ್ದರೆ; ಮುಂದೆ ಹಳ್ಳಿಗಳಲ್ಲಿ ಸರಿಯಾಗಿ ವಾಸ್ತುವಿನ್ಯಾಸ ರೂಪಿಸಬಹುದು. ಮೇಲಾಗಿ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ವಾಸ್ತುವಿನ್ಯಾಸಕಾರನ ಹುದ್ದೆಯನ್ನು ಸೃಷ್ಟಿಸಿದರೆ ಪರಿಣಾಮಕಾರಿಯಾಗಿ ವಾಸ್ತು ಅನುಷ್ಠಾನಗೊಳಿಸಬಹುದು.